ಪ್ಯಾರಿಸ್ ಒಲಿಂಪಿಕ್ಸ್ನಲ್ಲಿ ಮಹಿಳಾ ಕುಸ್ತಿ ಫೈನಲ್ ಪಂದ್ಯಕ್ಕೂ ಮುನ್ನ ವಿನೇಶ್ ಫೋಗಟ್ ನಿಗದಿಗಿಂತ ಹೆಚ್ಚಿನ ತೂಕ ಹೊಂದಿದಕ್ಕಾಗಿ ಫೈನಲ್‌ಗೆ ಅರ್ಹತೆ ಪಡೆದುಕೊಳ್ಳಲು ವಿಫಲರಾಗಿದ್ದರು. ಇದು ಭಾರತೀಯರಲ್ಲಿ ಅತೀವ ದುಃಖ ಸೃಷ್ಟಿ ಮಾಡಿತ್ತು. ವಿನೇಶ್ ಅವರಿಗೆ ಅಪಾರ ಮೆಚ್ಚುಗೆ ಜೊತೆಗೆ ಬೆಂಬಲ ವ್ಯಕ್ತವಾಗುತ್ತಿದೆ. ಕಾನೂನಾತ್ಮಕ ಹೋರಾಟಕ್ಕೆ ವಿನೇಶ್ ಇಳಿದಿದ್ದು ಪದಕದ ಕನಸು ಮತ್ತೆ ಚಿಗುರೊಡೆಯತೊಡಗಿದೆ.
ಒಲಿಂಪಿಕ್ ಸಂಸ್ಥೆ ಅನರ್ಹ ಎಂದು ಘೋಷಿಸುತ್ತಲೇ ಅವರ ಚೊಚ್ಚಲ ಒಲಿಂಪಿಕ್ಸ್ ಚಿನ್ನದ ಪದಕದ ಕನಸು ಭಗ್ನವಾಗಿತ್ತು. ಆ ಬಳಿಕ ಕೊಂಚ ಆರೋಗ್ಯದಲ್ಲಿ ಏರುಪೇರು ಕಂಡುಬಂದ ಬಳಿಕ ವಿನೇಶ್ ಆವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಈ ನಡುವೆ ಪದಕ ಕೈತಪ್ಪಿದ ಹತಾಶೆಯಲ್ಲಿದ್ದ ವಿನೇಶ್ ಕುಸ್ತಿಗೆ ವಿದಾಯವನ್ನು ಘೋಷಿಸಿದ್ದರು. ಆದರೀಗ ಒಲಿಂಪಿಕ್ಸ್ನಿಂದ ಸುದ್ದಿಯೊಂದು ಹೊರಬಿದ್ದಿದ್ದು, ವಿನೇಶ್ಗೆ ಬೆಳ್ಳಿ ಪದಕದ ಆಶಾಕಿರಣ ಮೂಡಿದೆ.
ವಾಸ್ತವವಾಗಿ ಒಲಿಂಪಿಕ್ಸ್ ಸ್ಪರ್ಧೆಯಿಂದ ಅನರ್ಹಗೊಂಡ ಬಳಿಕ ವಿನೇಶ್ ಫೋಗಟ್ ಅವರು ತನಗೆ ಕನಿಷ್ಠ ಬೆಳ್ಳಿ ಪದಕವನ್ನಾದರೂ ನೀಡಬೇಕು ಎಂದು ಕ್ರೀಡಾ ಮಧ್ಯಸ್ಥಿಕೆ ನ್ಯಾಯಾಲಯಕ್ಕೆ (CSA) ಮನವಿ ಮಾಡಿದ್ದರು. ಇದೀಗ CSA ವಿನೇಶ್ ಅವರ ಮನವಿಯನ್ನು ಸ್ವೀಕರಿಸಿದ್ದು ವಿಚಾರಣೆ ನಡೆಸಲು ಮುಂದಾಗಿದೆ. ಈ ಪ್ರಕರಣದ ಕುರಿತು ಅಂತಿಮ ನಿರ್ಧಾರ ಇನ್ನು 24-48 ಗಂಟೆಗಳ ಒಳಗಾಗಿ ತಿಳಿದುಬರಲಿದೆ. ಹೀಗಾಗಿ ವಿನೇಶ್ ತಮ್ಮ ಚೊಚ್ಚಲ ಒಲಿಂಪಿಕ್ ಪದಕ ಪಡೆಯುವ ಭರವಸೆಗೆ ಮತ್ತೊಮ್ಮೆ ಜೀವ ಬಂದಿದೆ.
ಸಿಎಎಸ್ ವಿಚಾರಣೆಯಲ್ಲಿ ವಿನೇಶ್ ಪರ ಜೊಯೆಲ್ ಮೊನ್ಲೂಯಿಸ್, ಎಸ್ಟೆಲ್ಲೆ ಇವನೊವಾ, ಹಬ್ಬೈನ್ ಎಸ್ಟೆಲ್ಲೆ ಕಿಮ್ ಮತ್ತು ಚಾರ್ಲ್ಸ್ ಆಮ್ಸನ್ ವಾದ ಮಂಡಿಸಲಿದ್ದಾರೆ. ಸೆಮಿಫೈನಲ್ ಗೆದ್ದುಕೊಂಡಿದ್ದು ಅರ್ಹ ತೂಕ ಹಾಗೂ ಸಾಧನೆಯಿಂದಾಗಿದೆ. ಇದರಿಂದಾಗಿ ಇವರಿಗೆ ಬೆಳ್ಳಿ ಪದಕ ಸಿಗಬೇಕೆಂಬುವುದು ವಾದ. ಇನ್ನು ವಿನೇಶ್ ಫೋಗಟ್ ಅವರು ರಿಯಲ್ ಸಿಂಹಿಣಿ, ಚಿನ್ನದ ಹುಡುಗಿ ಎಂದು ಜನರು ಕೊಂಡಾಡಿತ್ತಿದ್ದಾರೆ. ಹರಿಯಾಣ ಸರ್ಕಾರ ಪದಕ ಗೆದ್ದಷ್ಟೇ ಸಂಭ್ರಮಿಸಲು, ಗೌರವ ಕೊಡಲು ಮುಂದೆ ಬಂದಿದೆ.