Monday, September 16, 2024

ಉಳ್ಳಾಲ: ಪಿ.ಎಚ್.ಡಿ ವಿದ್ಯಾರ್ಥಿನಿ ನಾಪತ್ತೆ ಪ್ರಕರಣ; ವಿದೇಶಕ್ಕೆ ಹೋಗಿದ್ದೇಗೆ ಗೊತ್ತಾ‌? ತನಿಖೆ ವೇಳೆ ಬಾಯ್ಬಿಟ್ಟ ಶಾರೂಕ್

ಉಳ್ಳಾಲ: ದೇರಳಕಟ್ಟೆಯ ಖಾಸಗಿ ಕಾಲೇಜಿನ ಪಿಎಚ್‌.ಡಿ ಸಂಶೋಧನ ವಿದ್ಯಾರ್ಥಿನಿ ಚೈತ್ರಾ ನಾಪತ್ತೆ ಪ್ರಕರಣಕ್ಕೆ ಇಂದು ಬಹುತೇಕ ಅಂತ್ಯ ಕಾಣಲಿದೆ. ಇದೊಂದು ಲವ್ ಜಿಹಾದ್ ಎಂದು ಆರೋಪಿಸಿದ್ದ ಹಿಂದೂ ಸಂಘಟನೆಗಳು ಪೊಲೀಸ್ ಇಲಾಖೆಗೆ ಎಚ್ಚರಿಕೆ ಕೊಟ್ಟ ಬೆನ್ನಲ್ಲೇ ನಾಪತ್ತೆ ಪ್ರಕರಣದ ತನಿಖೆಯನ್ನು ಚುರುಕುಗೊಳಿಸಿದ್ದರು.‌ ಈಗ ತನಿಖೆ ಪ್ರಕಾರ ನಾಪತ್ತೆಯಾಗಿದ್ದ ಚೈತ್ರಾ ವಿದೇಶಕ್ಕೆ ತೆರಳಿರುವುದು ಖಚಿತವಾಗಿದೆ. ಆಕೆಯ ಸ್ನೇಹಿತ ಶಾರೂಕ್‌ನನ್ನು ಮಧ್ಯಪ್ರದೇಶದಿಂದ ಪೊಲೀಸರು ವಶಕ್ಕೆ ತೆಗೆದುಕೊಂಡು ತನಿಖೆ ನಡೆಸುತ್ತಿದ್ದಾರೆ. ತನಿಖೆ ವೇಳೆ ಹಲವು ಆಘಾತಕಾರಿ ಅಂಶಗಳು ಬಯಲಾಗಿದೆ.

ಅತ್ತ ವಿದೇಶಕ್ಕೆ ತೆರಳಿರುವ ಚೈತ್ರಾ ತಾನು ಸ್ವ ಇಚ್ಛೆಯಿಂದ ತೆರಳಿದ್ದು, ಈ ಕುರಿತು ಇಂದು ವಿದೇಶದಲ್ಲಿರುವ ಭಾರತದ ದೂತವಾಸದ ಮೂಲಕ ಮಂಗಳೂರು ಕಮಿಷನರ್‌ಗೆ ಮಾಹಿತಿ ನೀಡುವ ಸಾಧ್ಯತೆ ಇದೆ.

ಚೈತ್ರಾ ಫೆ. 17ರಂದು ಮಾಡೂರಿನ ಬಾಡಿಗೆ ಮನೆಯಿಂದ ಸ್ಕೂಟರ್‌ನಲ್ಲಿ ಹೊರಟು ಸುರತ್ಕಲ್‌ನಲ್ಲಿ ಸ್ಕೂಟರ್‌ ತ್ಯಜಿಸಿ ನಾಪತ್ತೆಯಾಗಿದ್ದಳು ನಾಪತ್ತೆಯ ಹಿಂದೆ ಡ್ರಗ್‌ ಪೆಡ್ಲರ್‌ ಅನ್ಯಕೋಮಿನ ಯುವಕನ ಕೈವಾಡವಿದೆ ಎಂದು ಹಿಂದೂ ಸಂಘಟನೆಗಳು ಪ್ರತಿಭಟನೆ ನಡೆಸುವ ಎಚ್ಚರಿಸಿದಾಗ ಪೊಲೀಸರು ತನಿಖೆಯನ್ನು ತೀವ್ರಗೊಳಿಸಿದ್ದರು.
ಆಕೆಯ ಮೊಬೈಲ್‌ ಲೊಕೇಶನ್‌ ಆಧಾರದಲ್ಲಿ ಬೆಂಗಳೂರು ಕಡೆ ತೆರಳಿರುವ ಮಾಹಿತಿಯನ್ನು ಕಲೆ ಹಾಕಿತ್ತು. ಈ ನಡುವೆ ಆಕೆ ಮೆಜೆಸ್ಟಿಕ್‌ನಿಂದ ಬಸ್‌ ಇಳಿದು ಹೋಗಿರುವ ಮಾಹಿತಿ ಸಿಸಿಟಿವಿಯಲ್ಲಿ ಪತ್ತೆ ಹಚ್ಚಿದ್ದ ಪೊಲೀಸರು ಬೆಂಗಳೂರು ವ್ಯಾಪ್ತಿಯಲ್ಲಿ ಆಕೆಯ ಶೋಧ ಕಾರ್ಯವನ್ನು ಚುರುಕುಗೊಳಿಸಿದ್ದರು. ಉಳ್ಳಾಲ ಪೊಲೀಸರ ಒಂದು ತಂಡ ತನಿಖೆಯ ಮುಂದುವರಿದ ಭಾಗವಾಗಿ, ಗೋವಾ, ಮದ್ಯಪ್ರದೇಶದ ಮೂಲಕ ವಿದೇಶಕ್ಕೆ ತೆರಳಿರುವ ಮಾಹಿತಿ ಕಲೆ ಹಾಕಿ ಮಧ್ಯಪ್ರದೇಶದಲ್ಲಿ ಸ್ನೇಹಿತನೊಂದಿಗಿದ್ದ ಶಾರೂಕ್‌ನನ್ನು ವಶಕ್ಕೆ ತೆಗೆದುಕೊಂಡಿದ್ದರು.

ನಾಪತ್ತೆಯಾಗಿರುವ ಚೈತ್ರಾಳೊಂದಿಗೆ ಸಂಪರ್ಕವಿದ್ದ ಪುತ್ತೂರು ಮೂಲದ ಶಾರೂಕ್‌ ಬೆಂಗಳೂರಿಗೆ ತಲುಪಿದ್ದ ಚೈತ್ರಾಳನ್ನು ಗೋವಾಕ್ಕೆ ಕರೆದುಕೊಂಡು ಹೋಗಿದ್ದು ಬಳಿಕ ಮಧ್ಯಪ್ರದೇಶದಲ್ಲಿ ಕಣ್ಣೂರು ಮೂಲದ ಶಾರೂಕ್‌ನ ಸ್ನೇಹಿತನೊಬ್ಬ ಚೈತ್ರಾ ಮತ್ತು ಶಾರೂಕ್‌ ಉಳಿದುಕೊಳ್ಳಲು ವ್ಯವಸ್ಥೆ ಮಾಡಿದ್ದ. ಮದ್ಯಪ್ರದೇಶದಲ್ಲಿದ್ದುಕೊಂಡೇ ಶಾರೂಕ್‌ನ ಹತ್ತಿರದ ಸಂಬಂಧಿಯಾಗಿದ್ದ ಕತಾರ್‌ನಲ್ಲಿ ನೆಲೆಸಿರುವ ಯುವಕ ಚೈತ್ರಾಳಿಗೆ ವಿಸಿಟಿಂಗ್‌ ವೀಸಾ ಮತ್ತು ವಿಮಾನದ ಟಿಕೆಟ್‌ ಮಾಡಿದ್ದು, ಅಲ್ಲಿಂದ ದಿಲ್ಲಿ ಮೂಲಕ ಕತಾರ್‌ಗೆ ಚೈತ್ರಾಳನ್ನು ಕಳುಹಿಸಿ ಶಾರೂಕ್‌ ವಾಪಸ್‌ ಮಧ್ಯಪ್ರದೇಶದಲ್ಲಿರುವ ಸ್ನೇಹಿತನ ಮನೆಗೆ ಬಂದಿದ್ದ. ಚೈತ್ರಾ ಪ್ರಸ್ತುತ ಕತಾರ್‌ಗೆ ತಲಪಿರುವುದು ಬಹುತೇಕ ಖಚಿತವಾಗಿದ್ದು, ಅಲ್ಲಿಂದ ಪೊಲೀಸರಿಗೆ ನಾನು ಸ್ವ ಇಚ್ಛೆಯಿಂದ ತೆರಳಿದ್ದೇನೆ ಎಂದು ಮಾಹಿತಿ ನೀಡಿದ್ದಾಳೆ ಎಂದು ಬಲ್ಲ ಮೂಲಗಳು ತಿಳಿಸಿವೆ.

ಶಾರೂಕ್‌ ಅಪರಾಧ ಪ್ರಕರಣದಲ್ಲಿ ಬಂಧಿತನಾಗಿರುವ ಹಿನ್ನೆಲೆಯಲ್ಲಿ ವಿದೇಶಕ್ಕೆ ತೆರಳಲು ಅವಕಾಶವಿಲ್ಲ. ಈ ನಿಟ್ಟಿನಲ್ಲಿ ದಿಲ್ಲಿಯ ಏರ್‌ಪೋರ್ಟ್‌ಗೆ ಬಿಟ್ಟು ಬಂದ ಬಳಿಕ ಮಧ್ಯಪ್ರದೇಶದಲ್ಲಿದ್ದ ಸ್ನೇಹಿತ ಮನೆಗೆ ಮರಳಿದಾಗ ಉಳ್ಳಾಲ ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದರು. ಬಳಿಕ ಆತನನ್ನು ತನಿಖೆಗೆ ಒಳಪಡಿಸಿದ್ದಾರೆ ಎಂದು ಬಲ್ಲ ಮೂಲಗಳಿಂದ ತಿಳಿದು ಬಂದಿದೆ. ಉಳ್ಳಾಲ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Related Articles

Latest Articles