ಉಳ್ಳಾಲ: ಚಿಕ್ಕಮಗಳೂರು ಜಿಲ್ಲೆಯ ಪರಿಶಿಷ್ಟ ಜಾತಿಯ 17 ವರ್ಷದ ಬಾಲಕಿಯನ್ನು ಮದುವೆಯಾಗುವುದಾಗಿ ನಂಬಿಸಿ ಆಕೆಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪಿಯನ್ನು ಉಳ್ಳಾಲ ಠಾಣೆಯ ಪೊಲೀಸರು ಬಂಧಿಸಿದ್ದಾರೆ.
ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲ್ಲೂಕಿನ ಅಣಜೂರು ಗ್ರಾಮದ ಮೊಹಮ್ಮದ್ ರಝೀನ್ (25) ಬಂಧಿತ ಆರೋಪಿ. ಆರೋಪಿ ವಿರುದ್ಧ ಬಾಲಕಿ ದೂರು ನೀಡಿದ್ದಳು.
‘ಬಾಲಕಿಯನ್ನು ಪ್ರೀತಿಸುವುದಾಗಿ ಹೇಳಿದ್ದ ಆರೋಪಿ ಮೊಹಮ್ಮದ್ ರಝೀನ್ ನಾಲ್ಕು ತಿಂಗಳ ಹಿಂದೆ ನಗರದ ಪಂಪ್‌ವೆಲ್‌ಗೆ ಆಕೆಯನ್ನು ಬಸ್‌ನಲ್ಲಿ ಕರೆದುಕೊಂಡು ಬಂದಿದ್ದ. ನಂತರ ಆತನ ಆಟೊರಿಕ್ಷಾದಲ್ಲಿ ಆಕೆಯನ್ನು ಕುಂಪಲದ ಬಾಡಿಗೆ ಮನೆಗೆ ಕರೆದುಕೊಂಡು ಹೋಗಿ ಮದುವೆಯಾಗುವುದಾಗಿ ನಂಬಿಸಿ ಒತ್ತಾಯಪೂರ್ವಕವಾಗಿ ಆಕೆಯ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ್ದಾಗಿ ದೂರು ದಾಖಲಾಗಿದೆ.
ಬಾಲಕಿಯು ನೀಡಿದ ದೂರಿನ ಆಧಾರದಲ್ಲಿ ಆರೋಪಿ ವಿರುದ್ಧ ಲೈಂಗಿಕ ದೌರ್ಜನ್ಯದಿಂದ ಮಕ್ಕಳ ರಕ್ಷಣೆ (ಪೊಕ್ಸೊ) ಕಾಯ್ದೆ ಅಡಿ ಪ್ರಕರಣ ದಾಖಲಿಸಲಾಗಿದೆ. ಆರೋಪಿಯನ್ನು ಭಾನುವಾರ ಬಂಧಿಸಿದ್ದು, ನ್ಯಾಯಾಂಗ ಬಂಧನ ವಿಧಿಸಲಾಗಿದೆ’ ಎಂದು ಪೊಲೀಸ್ ಮೂಲಗಳು ತಿಳಿಸಿವೆ.