Friday, July 19, 2024

ಅಯೋಧ್ಯೆ ಪ್ರಕರಣದಲ್ಲಿ ಹಿಂದೂ ಕಾರ್ಯಕರ್ತನ ಬಂಧನ ಖಂಡಿಸಿ ನಾಳೆ ಬಿಜೆಪಿ ಪ್ರತಿಭಟನೆ

ಬೆಂಗಳೂರು: 1992 ರಲ್ಲಿ ಬಾಬರಿ ಮಸೀದಿ ಧ್ವಂಸದ ನಂತರ ಹುಬ್ಬಳ್ಳಿಯಲ್ಲಿ ನಡೆದ ಹಿಂಸಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಹಿಂದೂ ಕಾರ್ಯಕರ್ತ ಶ್ರೀಕಾಂತ್ ಪೂಜಾರಿಯ ಬಂಧನ ಖಂಡಿಸಿ ಭಾರತೀಯ ಜನತಾ ಪಕ್ಷ(ಬಿಜೆಪಿ) ಮಂಗಳವಾರ ರಾಜ್ಯಾದ್ಯಂತ ಪ್ರತಿಭಟನೆಗೆ ಕರೆ ನೀಡಿದೆ.

ಹಿಂದೂ ಕಾರ್ಯಕರ್ತನ ಬಂಧನವನ್ನು ಖಂಡಿಸಿರುವ ಬಿಜೆಪಿ ರಾಜ್ಯಾಧ್ಯಕ್ಷ ಬಿ ವೈ ವಿಜಯೇಂದ್ರ, ಉತ್ತರ ಪ್ರದೇಶದ ಅಯೋಧ್ಯೆಯಲ್ಲಿ ರಾಮಮಂದಿರದ ಶಂಕುಸ್ಥಾಪನೆಗೆ ಕೆಲವೇ ದಿನಗಳ ಮೊದಲು 31 ವರ್ಷಗಳ ಹಿಂದಿನ ಪ್ರಕರಣವನ್ನು ಪುನಃ ತೆರೆಯುವುದರ ಹಿಂದಿನ ರಾಜ್ಯ ಸರ್ಕಾರದ ಉದ್ದೇಶವನ್ನು ಇದು ಸ್ಪಷ್ಟವಾಗಿ ತೋರಿಸುತ್ತಿದೆ ಎಂದಿದ್ದಾರೆ.

ಜನವರಿ 22 ರಂದು ಇಡೀ ದೇಶವೇ ಶ್ರೀರಾಮನ ಮಹಾಮಸ್ತಕಾಭಿಷೇಕವನ್ನು ಆಚರಿಸುತ್ತಿರುವಾಗ ಕರ್ನಾಟಕದ ಈಗಿನ ಕಾಂಗ್ರೆಸ್ ಸರ್ಕಾರದ ಧೋರಣೆ ಹಿಂದೂ ವಿರೋಧಿಯಾಗಿದೆ. ಇದು ಅತ್ಯಂತ ದುರದೃಷ್ಟಕರ ಎಂದು ಸಿದ್ದರಾಮಯ್ಯ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.

ರಾಜ್ಯ ಸರ್ಕಾರ ಪದೇ ಪದೇ ಕರ್ನಾಟಕದಲ್ಲಿರುವ ಹಿಂದೂಗಳ ಭಾವನೆಗಳಿಗೆ ಧಕ್ಕೆ ತರುವ ಪ್ರಯತ್ನ ಮಾಡುತ್ತಿದೆ ಎಂದು ಬಿವೈ ವಿಜಯೇಂದ್ರ ಆರೋಪಿಸಿದ್ದಾರೆ.

ನ್ಯಾಯಾಲಯದಿಂದ ಖುಲಾಸೆಗೊಳ್ಳುವವರೆಗೂ ಅಪರಾಧಿ ಅಪರಾಧಿಯಾಗಿಯೇ ಇರುತ್ತಾನೆ ಎಂಬ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಹೇಳಿಕೆಗೆ ಪ್ರತಿಕ್ರಿಯಿಸಿದ ವಿಜಯೇಂದ್ರ, ನಿಮ್ಮ ಆದ್ಯತೆಗಳು, ನಿಮ್ಮ ಉದ್ದೇಶ ಏನು ಎಂಬುದು ಸ್ಪಷ್ಟವಾಗಿದೆ. ಹಿಂದೂ ಕಾರ್ಯಕರ್ತರ ವಿರುದ್ಧ ಕ್ರಮಕ್ಕೆ ಆಯ್ಕೆಮಾಡಿದ ಸಂದರ್ಭವೇನು? 31 ವರ್ಷಗಳ ಹಿಂದಿನ ಪ್ರಕರಣವನ್ನು ಈಗ ಮತ್ತೆ ತೆರೆಯುವ ಅಗತ್ಯವಿದೆಯೇ? ಹಿಂದೂ ಕಾರ್ಯಕರ್ತ ಮತ್ತು ರಾಮ ಭಕ್ತನನ್ನು ಬಂಧಿಸಲು ಕಾಂಗ್ರೆಸ್ ಸರ್ಕಾರ “ಧೈರ್ಯ” ಮಾಡುವ ಮೂಲಕ ರಾಜ್ಯದಲ್ಲಿ ಶಾಂತಿ ಮತ್ತು ಸೌಹಾರ್ದತೆಯನ್ನು ಕದಡಲು ಪ್ರಯತ್ನಿಸುತ್ತಿದ್ದಾರೆ ಎಂದರು.

Related Articles

Latest Articles