Friday, June 27, 2025

ಉಡುಪಿ: ಪಾರ್ಕ್‌‌ನ ಮರಗಳಿಗೆ ಕೊಡಲಿ ಏಟು ಕೊಟ್ಟ ಗುತ್ತಿಗೆದಾರ; ಬರೋಬ್ಬರಿ 25 ಸಾವಿರ ಬಹುಮಾನ ಕೊಟ್ರು ನೋಡಿ

ಉಡುಪಿ ನಗರಸಭೆ ಅನುಮತಿ ಇಲ್ಲದೆಯೇ ನಗರದ ಭುಜಂಗ ಪಾರ್ಕ್‌ ನಲ್ಲಿದ್ದ ನಾಲ್ಕೈದು ಮರಗಳನ್ನು ಕಡಿದು ಹಾಕಿದ ಗುತ್ತಿಗೆದಾರನ ವಿರುದ್ಧ ಸಾರ್ವಜನಿಕರು ಆಕ್ರೋಶ ವ್ಯಕ್ತವಾಗಿದ್ದು, ಈ ಹಿನ್ನೆಲೆಯಲ್ಲಿ ಸ್ಥಳಕ್ಕೆ ಆಗಮಿಸಿದ ಪೌರಾಯುಕ್ತರು ಗುತ್ತಿಗೆದಾರನನ್ನು ತರಾಟೆಗೆ ತೆಗೆದುಕೊಂಡು 25ಸಾವಿರ ರೂ. ದಂಡ ವಿಧಿಸಿದ್ದಾರೆ.

ಪಾರ್ಕ್ ನಲ್ಲಿ ಬೆಳೆದು ನಿಂತ ಮರಗಳನ್ನು ಅಪಾಯಕಾರಿ ಎಂಬ ನೆಲೆಯಲ್ಲಿ ಪಾರ್ಕ್ ನಿರ್ವಹಣೆ ಮಾಡುತ್ತಿರುವ ಗುತ್ತಿಗೆದಾರ ಸುರೇಶ್ ಎಂಬವರ ಸೂಚನೆಯಂತೆ ಕಾರ್ಮಿಕರು ಕಡಿಯುತ್ತಿದ್ದರು. ಇದಕ್ಕೆ ಪಾರ್ಕ್ ನಲ್ಲಿ ವಿಹರಿಸುವ ಸಾರ್ವಜನಿಕರು ಆಕ್ಷೇಪ ವ್ಯಕ್ತಪಡಿಸಿದ್ದರು.

ಆದರೂ ಕಾರ್ಮಿಕರು ನಾಲ್ಕೈದು ಮರಗಳನ್ನು ಕಡಿದು ಧರೆಗೆ ಉರುಳಿಸಿದ್ದಾರೆ. ಉಳಿದ ಮರಗಳನ್ನು ಕಡಿಯಲು ಸಿದ್ಧತೆ ಮಾಡುತ್ತಿದ್ದಾಗ ಮಾಹಿತಿ ತಿಳಿದು ಸ್ಥಳಕ್ಕೆ ಆಗಮಿಸಿದ ಪೌರಾಯುಕ್ತ ರಾಯಪ್ಪ ಮರ ಕಡಿಯುವುದನ್ನು ತಡೆದಿದ್ದಾರೆ.

ಈ ವೇಳೆ ಗುತ್ತಿಗೆದಾರರನನ್ನು ಸ್ಥಳಕ್ಕೆ ಕರೆಸಿ, ಯಾವುದೇ ಅನುಮತಿ ಇಲ್ಲದೇ ಮರ ಕಡಿದಿರುವುದಕ್ಕೆ ತೀವ್ರ ತರಾಟೆಗೆ ತೆಗೆದುಕೊಂಡರು. ಈ ತಪ್ಪಿಗೆ 25 ಸಾವಿರ ರೂ. ದಂಡ ಪಾವತಿಸುವಂತೆ ಮತ್ತು ಒಂದು ಮರದ ಬದಲು 10 ಗಿಡಗಳನ್ನು ನೆಡುವಂತೆ ಗುತ್ತಿಗೆದಾರನಿಗೆ ಪೌರಾಯುಕ್ತರು ಸೂಚಿಸಿದರು.

ಈ ಸಂದರ್ಭದಲ್ಲಿ ಪರಿಸರ ಇಂಜಿನಿಯರ್ ಸ್ನೇಹಾ ಕೆ.ಎಸ್. ಹಾಜರಿದ್ದರು. ಮಾಹಿತಿ ತಿಳಿದು ಅರಣ್ಯ ಇಲಾಖೆಯ ಉಪವಲಯ ಅರಣ್ಯಾಧಿಕಾರಿಗಳು ಕೂಡ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

Related Articles

Latest Articles