ಮಂಗಳೂರು : ಸೆಪ್ಟೆಂಬರ್ 26 ರ ವಿಶ್ವ ಪರಿಸರ ಆರೋಗ್ಯ ದಿನಾಚರಣೆಯ ಅಂಗವಾಗಿ ಮಂಗಳೂರಿನ ಪ್ರತಿಷ್ಠಿತ ಸ್ವಾಯತ್ತ ಶಿಕ್ಷಣ ಸಂಸ್ಥೆಯಾದ ಸಂತ ಆಗ್ನೆಸ್ ಕಾಲೇಜಿನಲ್ಲಿ ಪರಿಸರ ಸಂಘ, ಸಂತ ಆಗ್ನೆಸ್ ಹಿರಿಯ ಪ್ರಾಥಮಿಕ ಶಾಲೆ, ಸಂತ ಆಗ್ನೆಸ್ ಸಿಬಿಎಸ್‌ಇ ಶಾಲೆ, ಸಂತ ಆಗ್ನೆಸ್ ಪ್ರೌಢ ಶಾಲೆ ಮತ್ತು ಸಂತ ಆಗ್ನೆಸ್ ಪದವಿ ಪೂರ್ವ ಕಾಲೇಜು ಈ ಸಂಯುಕ್ತ ಸಂಸ್ಥೆಗಳ ಸಹಯೋಗದಲ್ಲಿ ‘ವಾಹನರಹಿತ ಕ್ಯಾಂಪಸ್ ದಿನಾಚರಣೆ’ (ಝೀರೋ ವೆಹಿಕಲ್ ಡೇ) ಅನ್ನು ಆಯೋಜಿಸಲಾಯಿತು.
ವಿದ್ಯಾಸಂಸ್ಥೆಯ ಆವರಣಕ್ಕೆ ಪ್ರಾಧ್ಯಾಪಕರು, ಉಪನ್ಯಾಸಕರು, ವಿದ್ಯಾರ್ಥಿಗಳು , ಕಾರ್ಮಿಕರು ವಾಹನವಿಲ್ಲದೆ ಬಂದು ಕಾರ್ಯನಿರ್ವಹಿಸುವ ಮೂಲಕ ಸಹಕಾರ ನೀಡಿದರು.
ಈ ವಿಶೇಷ ಕಾರ್ಯಕ್ರಮದ ಉದ್ದೇಶದ ಕುರಿತು ಮಾಹಿತಿ ನೀಡಿದ ಸಂತ ಆಗ್ನೆಸ್ ಕಾಲೇಜಿನ ಪ್ರಾಂಶುಪಾಲೆ ಸಿಸ್ಟರ್ ಡಾ ವೆನಿಸ್ಸಾ ಎ ಸಿ ಅವರು ‘ಪರಿಸರ ಸಂರಕ್ಷಣೆಯ ಜಾಗೃತಿ ಮತ್ತು ದೈನಂದಿನ ಇಂಗಾಲವನ್ನು ನಿಯಂತ್ರಿಸುವ ಅರಿವು ಮೂಡಿಸಲು ಸಂತ ಆಗ್ನೆಸ್ ಸಂಸ್ಥೆಯಲ್ಲಿ ಈ ದಿನವನ್ನು ಆಚರಿಸಲಾಗುತ್ತಿದೆ ಎಂದರು.
ಇದೊಂದು ಮಂಗಳೂರಿನಲ್ಲೇ ಅಪೂರ್ವ ಕಾರ್ಯಕ್ರಮವಾಗಿದ್ದು ಜಾಗತಿಕ ತಾಪಮಾನದಲ್ಲಾಗುವ ಬದಲಾವಣೆಗೆ ಮನುಷ್ಯನ ಚಟುವಟಿಕೆಗಳು ಹೇಗೆ ಕಾರಣವಾಗುತ್ತದೆ ಎಂಬುದನ್ನು ತಿಳಿಸಿಕೊಡುವುದು ನಮ್ಮ ಉದ್ದೇಶ’ ಎಂದರು.
ಹೊಗೆ, ಶಬ್ದಗಳೇ ಇಲ್ಲದ ಕ್ಯಾಂಪಸ್‌ನೊಳಗೆ ಸೈಕಲ್ ಮತ್ತು ಎಲೆಕ್ಟ್ರಿಕ್ ವಾಹನಗಳಿಗೆ ಮಾತ್ರ ಪ್ರವೇಶ ನೀಡಲಾದದ್ದು ವಿಶೇಷವಾಗಿತ್ತು. ಸಂಸ್ಥೆಗಳ ಮುಖ್ಯಸ್ಥರು ಮತ್ತು ವಿದ್ಯಾರ್ಥಿಗಳು ಕ್ಯಾಂಪಸ್‌ನೊಳಗೆ ಎಲೆಕ್ಟ್ರಿಕ್ ವಾಹನದೊಂದಿಗೆ ಮೆರವಣಿಗೆ ನಡೆಸಿದರು.
ಸಂತ ಆಗ್ನೆಸ್ ಸಂಸ್ಥೆಗಳ ಜಂಟಿ ಕಾರ್ಯದರ್ಶಿ ಡಾ ಮರಿಯಾ ರೂಪ ಎಸಿ, ಪ್ರಾಂಶುಪಾಲರಾದ ಡಾ ವೆನಿಸ್ಸಾ ಎಸಿ, ಆಡಳಿತಾಧಿಕಾರಿ ಸಿಸ್ಟರ್ ಕಾರ್ಮೆಲ್ ರೀಟಾ ಎಸಿ, ಉಪ ಪ್ರಾಂಶುಪಾಲರಾದ ಸಿಸ್ಟರ್ ಕ್ಲೆರಾ ಎಸಿ ಮತ್ತು ಪರಿಸರ ಸಂಘದ ಸಂಯೋಜಕಿ ವಿವಿದ್ ಡಿಸೋಜಾ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ಪರಿಸರ ಸಂಘದ ಕಾರ್ಯದರ್ಶಿ ಸಾಯಿ ತನ್ವಿ ದಿನದ ಮಹತ್ವದ ಕುರಿತು ಮಾತನಾಡಿದರು. ಕ್ಯಾಂಪಸ್ ಅನ್ನು ಶಬ್ದ ಮತ್ತು ವಾಯು ಮಾಲಿನ್ಯದಿಂದ ಮುಕ್ತಗೊಳಿಸಲು ಮತ್ತು ಸಾರ್ವಜನಿಕ ಸಾರಿಗೆಯ ಬಳಕೆಯನ್ನು ಉತ್ತೇಜಿಸಲು ಇಂಗಾಲದ ಹೊರಸೂಸುವಿಕೆಯನ್ನು ಕಡಿಮೆ ಮಾಡುವ ಉದ್ದೇಶದಿಂದ ಈ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು .
ಈ ವಿಶಿಷ್ಟ ಯೋಜನೆಯಿಂದ ಕ್ಯಾಂಪಸ್ ಪರಿಸರದಲ್ಲಿ ಇಂಗಾಲದ ಡೈ ಆಕ್ಸೈಡ್ ಪ್ರಮಾಣ ಕಡಿಮೆ ಆಗಿರುವ ವ್ಯತ್ಯಾಸವನ್ನು ಗುರುತಿಸುವ ಸಲುವಾಗಿ ಕಾರ್ಬನ್ ಫೂಟ್‌ಪ್ರಿಂಟ್ ಸಮೀಕ್ಷೆಯನ್ನೂ ಕೈಗೊಳ್ಳಲಾಗಿತ್ತು. ಗೇಟ್ ಒಳಗೆ ಯಾವುದೇ ವಾಹನಗಳನ್ನು ಬಿಡದ ಕಾರಣ, ಪರಿಸರ ಸಂಘದ ಸದಸ್ಯರು ಬೆಳಿಗ್ಗೆ ಮತ್ತು ಸಂಜೆ ಶಾಲಾ ಮಕ್ಕಳಿಗೆ ಕ್ಯಾಂಪಸ್‌ಗೆ ತೆರಳಲು ಸಹಾಯ ಮಾಡಿದರು.