ಉತ್ತರಪ್ರದೇಶ: ದೂರು ಕೊಡಲು ಬಂದಿದ್ದ ಸಂತ್ರಸ್ಥ ದಲಿತ ಮಹಿಳೆಯ ಬಳಿ ಆರೋಪಿಗಳನ್ನು ಬಂಧಿಸುವುದಾಗಿ ಹೇಳಿ ಕಾರಿನಲ್ಲಿ ಕರೆದೊಯ್ದು ಅತ್ಯಾಚಾರವೆಸಗಿರುವ ಪ್ರಕರಣ ಬೆಳಕಿಗೆ ಬಂದಿದೆ. ಆರೋಪಿ ಪ್ರಯಾಗ್‌ರಾಜ್ ಪೊಲೀಸ್ ಠಾಣೆಯ ಸಬ್ ಇನ್ಸ್ ಪೆಕ್ಟರ್ ನನ್ನು ಅಮಾನತು ಮಾಡಲಾಗಿದೆ. ಸುಧೀರ್ ಕುಮಾರ್ ಪಾಂಡೆ ಅಮಾನತುಗೊಂಡಿರುವ ಸಬ್ ಇನ್ಸ್ ಪೆಕ್ಟರ್.
ಮಹಿಳೆಯ ದೂರಿನ ಆಧಾರದ ಮೇಲೆ ಪಿಎಸ್ ಐ ಸಸ್ಪೆಡ್ ಆಗಿದ್ದು, ಆರೋಪಿ ತಲೆ ಮರೆಸಿಕೊಂಡಿದ್ದಾನೆ ಎಂದು ಹಂಡಿಯಾದ ಸಹಾಯಕ ಪೊಲೀಸ್ ಆಯುಕ್ತ ಸುಧೀರ್ ಕುಮಾರ್ ತಿಳಿಸಿದ್ದಾರೆ.
ಪಾಂಡೆ ವಿರುದ್ಧ ಐಪಿಸಿ ಸೆಕ್ಷನ್ 376 (ಅತ್ಯಾಚಾರ), 120 ಬಿ (ಕ್ರಿಮಿನಕ್ ಪಿತೂರಿ) ಮತ್ತು ಎಸ್ ಸಿ ಎಸ್ ಟಿ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ.
ಮಹಿಳೆಗೆ ಕೆಲ ಪುರುಷರು ಕಿರುಕುಳ ನೀಡಿ ಕೊಲೆ ಬೆದರಿಕೆ ಹಾಕಿದ್ದರು. ಪೊಲೀಸ್ ಸಬ್ ಇನ್ಸ್ ಪೆಕ್ಟರ್ ಪಾಂಡೆ ಮಹಿಳೆಯನ್ನು ಸೆ.21ರಂದು ಪೊಲೀಸ್ ಔಟ್ ಪೋಸ್ಟ್ ಠಾಣೆಗೆ ಕರೆದಿದ್ದ. ಆರೋಪಿಗಳನ್ನು ಬಂಧಿಸಲು ಹೋಗುವ ನೆಪದಲ್ಲಿ ಆಕೆಯನ್ನು ಕಾರಿನಲ್ಲಿ ಕರೆದೊಯ್ದು, ಮತ್ತು ಬರುವ ಔಷಧ ಬೆರೆಸಿ ತಂಪು ಪಾನೀಯವನ್ನು ಮಹಿಳೆಗೆ ನೀಡಿದ್ದಾನೆ.
ಬಳಿಕ ಆಕೆ ಪ್ರಜ್ಞೆ ತಪ್ಪಿ ಬಿದ್ದಾಗ ಆಕೆಯ ಮೇಲೆ ಅತ್ಯಾಚಾರ ಎಸಗಿದ್ದಾನೆ ಎನ್ನಲಾಗಿದೆ. ಪ್ರಕರಣ ಸಂಬಂಧ ತನಿಖೆ ನಡೆಸುವಂತೆ ಪೊಲೀಸ್ ಕಮಿಷ್ನರ್ ರಮಿತ್ ಶರ್ಮಾ ಹಂಡಿಯಾ ಎಸಿಪಿ ಸುಧೀರ್ ಕುಮಾರ್ ಅವರಿಗೆ ಸೂಚಿಸಿದ್ದಾರೆ ಎಂದು ತಿಳಿದುಬಂದಿದೆ.