ಕಾಫಿನಾಡಿನಲ್ಲಿ ನಡೆದ ಶ್ವೇತಾ ಎಂಬ ಮಹಿಳೆಯ ಕೊಲೆ ಪ್ರಕರಣಕ್ಕೆ ಟ್ವಿಸ್ಟ್ ಸಿಕ್ಕಿದೆ. ಪತಿ ದರ್ಶನ್ ಪತ್ನಿಯನ್ನು ತಾನೇ ಕೊಲೆ ಮಾಡಿದ್ದಾಗಿ ಪೊಲೀಸರ ಮುಂದೆ ಒಪ್ಪಿಕೊಂಡಿದ್ದಾನೆ. ರಾಗಿ ಮುದ್ದೆಯಲ್ಲಿ ಸೈನೇಡ್ ಬೆರೆಸಿ ಕೊಲೆ ಮಾಡಿದ್ದಾಗಿ ಆತ ಪೊಲೀಸರ ಮುಂದೆ ಹೇಳಿದ್ದಾನೆ ಎಂದು ತಿಳಿದುಬಂದಿದೆ.
ವಿಷದ ಇಂಜೆಕ್ಷನ್ ನೀಡಿ ಕೊಲೆ ಮಾಡಿರಬಹುದು ಎಂದು ಶಂಕಿಸಲಾಗಿತ್ತು. ಪತಿ ದರ್ಶನ್ ಇನ್ನೊಬ್ಬಳು ಯುವತಿಯೊಂದಿಗೆ ಅನೈತಿಕ ಸಂಬಂಧ ಹೊಂದಿದ್ದ. ಇದು ಪತ್ನಿ ಶ್ವೇತಾಗೆ ತಿಳಿದು ಜಗಳ ಮಾಡಿದ್ದಳು. ಸಂಬಂಧಿಸಿದ ಯುವತಿಗೆ ಕರೆ ಮಾಡಿ ಪತಿಯ ತಂಟೆಗೆ ಬರಬೇಡ ಎಂದು ವಾರ್ನಿಂಗ್ ಕೂಡಾ ನೀಡಿದ್ದಳು.
ಇದಾದ ಮೇಲೆ ತನ್ನ ಅನೈತಿಕ ಸಂಬಂಧಕ್ಕೆ ಅಡ್ಡಿ ಬರುತ್ತಾಳೆ ಅಂತ ದರ್ಶನ್ ತನ್ನ ಪತ್ನಿಯನ್ನು ಕೊಲೆ ಮಾಡಿದ್ದ. ಅನಂತರ ಹೃದಯಾಘಾತದಿಂದ ಸಾವನ್ನಪ್ಪಿದ್ದಾಳೆ ಅಂತ ಕಥೆ ಕಟ್ಟಿದ್ದ.
ಶ್ವೇತಾ ಕುಟುಂಬದವರು ಬರುವ ಮುಂಚೆಯೇ ಅಂತ್ಯಕ್ರಿಯೆಗೆ ಸಿದ್ಧತೆ ನಡೆಸಿದ್ದರಿಂದ ಅವರ ಕುಟುಂಬದವರು ಅನುಮಾನಗೊಂಡಿದ್ದರು. ಮರಣೋತ್ತರ ಪರೀಕ್ಷೆ ನಡೆಸಬೇಕೆಂದು ಪೊಲೀಸರಿಗೆ ಮನವಿ ಮಾಡಿದ್ದರು.
ಮರಣೋತ್ತರ ಪರೀಕ್ಷೆಯಲ್ಲಿ ಹೃದಯಾಘಾತ ಸಂಭವಿಸಿಲ್ಲ ಅನ್ನೋದು ಖಾತ್ರಿಯಾಗಿತ್ತು. ಜೊತೆಗೆ ಶ್ವೇತಾ ದೇಹದಲ್ಲಿ ವಿಷವಿತ್ತು. ಶ್ವೇತಾ ಕೈಮೇಲೆ ಸಣ್ಣ ಗಾಯದ ಗುರುತು ಇದ್ದಿದ್ದರಿಂದ ವಿಷದ ಇಂಜೆಕ್ಷನ್ ನೀಡಿರಬಹುದು ಎಂದು ಅನುಮಾನಿಸಲಾಗಿತ್ತು. ಆದ್ರೆ, ಆರೋಪಿಯೇ ಈಗ ನಡೆದ ವಿಷಯ ಬಾಯ್ಬಿಟ್ಟಿದ್ದಾನೆ.