ಕರ್ನಾಟಕ ರಾಜಭವನಕ್ಕೆ ಬಾಂಬ್ ಬೆದರಿಕೆ ಬಂದಿದೆ ಎನ್ನಲಾಗಿದೆ. ನಿನ್ನೆ ರಾತ್ರಿ ಸರಿ ಸುಮಾರು 11:40 ಸುಮಾರಿಗೆ ರಾಜಭವನಕ್ಕೆ ಕರೆ ಬಂದಿದೆ ಎನ್ನಲಾಗಿದೆ. ಕೂಡಲೇ ರಾಜಭವನ ಸಿಬ್ಬಂದಿ ವಿಧಾನಸೌಧ ಪೊಲೀಸ್ ಠಾಣಾ ಸಿಬ್ಬಂದಿಗೆ ಕರೆ ಮಾಡಿ ಮಾಹಿತಿ ನೀಡಿದ್ದಾರೆ.
ಸ್ಥಳಕ್ಕೆ ಬಾಂಬ್ ನಿಷ್ಕ್ರಿಯ ದಳ ಆಗಮಿಸಿ ಪರಿಶೀಲನೆ ನಡೆಸಿದೆ. ಎಲ್ಲಾ ಕಡೆ ಸ್ಥಳ ಪರಿಶೀಲನೆ ನಡೆಸಿದ ಬಳಿಕ ಇದೊಂದು ಹುಸಿ ಬಾಂಬ್ ಕರೆ ಅಂತ ತಿಳಿದು ಬಂದಿದೆ.
ಇನ್ನು ಉಪ್ಪಾರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಕರೆ ಬಂದಿದೆ ಎನ್ನಲಾಗಿದ್ದು, ಘಟನೆ ಸಂಬಂಧ ಕರೆ ಮಾಡಿದವರ ಸಂಖ್ಯೆಯನ್ನು ಪರಿಶೀಲನೆ ನಡೆಸಿ, ಕೂಡಲೇ ಆ ವ್ಯಕ್ತಿಯನ್ನು ಬಂಧಿಸಲಾಗಿದೆ. ಘಟನೆ ಸಂಬಂಧ ಬಂಧಿತ ವ್ಯಕ್ತಿಯಿಂದ ಮಾಹಿತಿಯನ್ನು ಪಡೆದುಕೊಳ್ಳಲಾಗಿದೆ. ಈ ನಡುವೆ ಕರೆ ಮಾಡಿದ ವ್ಯಕ್ತಿ ಮಾನಸಿಕ ಅಸ್ವಸ್ಥನಂತೆ ವರ್ತನೆ ಮಾಡುತ್ತಿದ್ದಾನೆ ಎಂದು ವರದಿಗಳು ಹೇಳಿವೆ.
ಇನ್ನು ಕಳೆದ ವಾರ ರಾಜಧಾನಿ ಬೆಂಗಳೂರಿನ 15 ಶಾಲೆಗಳಿಗೆ ಬಾಂಬ್ ಬೆದರಿಕೆ ಬಂದಿದ್ದವು.