Wednesday, December 11, 2024

ರಾಡ್‌ನಿಂದ ಹೊಡೆದು ವೃದ್ಧ ದಂಪತಿಯ ಬರ್ಬರ ಹತ್ಯೆ

ರಾಡ್‌ನಿಂದ ಹೊಡೆದು ಮನೆಯಲ್ಲಿದ್ದ ವೃದ್ಧ ದಂಪತಿಯನ್ನು ಬರ್ಬರವಾಗಿ ಹತ್ಯೆಗೈದ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೊಸಕೋಟೆ ತಾಲೂಕಿನ ಸೂಲಿಬೆಲೆಯಲ್ಲಿ ನಡೆದಿದೆ.

ರಾಮಕೃಷ್ಣಪ್ಪ (70) ಹಾಗೂ ಮುನಿರಾಮಕ್ಕ (65) ಕೊಲೆಯಾದ ದಂಪತಿ. ಇನ್ನು ಆಸ್ತಿ ವಿಚಾರವಾಗಿ ಮಗ ತಂದೆ ತಾಯಿಗೆ ರಾಡ್‌ನಿಂದ ಹೊಡೆದು ಕೊಲೆ ಮಾಡಿರಬಹುದು ಎಂಬ ಶಂಕೆ ವ್ಯಕ್ತವಾಗಿದ್ದು, ಮಗ ನರಸಿಂಹನನ್ನು ಸೂಲಿಬೆಲೆ ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಮದುವೆಯಾದಗಲಿನಿಂದಲೂ ನರಸಿಂಹ ತಂದೆ ತಾಯಿಯನ್ನು ಬಿಟ್ಟು ಪ್ರತ್ಯೇಕವಾಗಿ ವಾಸವಾಗಿದ್ದು, ಒಬ್ಬನೇ ಮಗನಾದರೂ ತಂದೆ ತಾಯಿಯನ್ನು ಹೊರಗಿಟ್ಟಿದ್ದ.

ವೃದ್ಧ ದಂಪತಿಗೆ ಒಟ್ಟು 5 ಜನ ಮಕ್ಕಳಿದ್ದು, ಈ ಪೈಕಿ ನಾಲ್ಕು ಮಂದಿ ಹೆಣ್ಣುಮಕ್ಕಳು ಹಾಗೂ ಒಬ್ಬ ಗಂಡು ಮಗ. ಮದುವೆಯಾದಗಿನಿಂದ ನರಸಿಂಹಮೂರ್ತಿ ಬೇರೆ ಇದ್ದು, ತನ್ನ ಎಲ್ಲಾ ಮಕ್ಕಳನ್ನು ಸಾಕಿ ವೃದ್ಧ ದಂಪತಿ ಮದುವೆ ಮಾಡಿಕೊಟ್ಟಿದ್ದರು. ಹೆಣ್ಣು ಮಕ್ಕಳಿಗೆಲ್ಲಾ ಮದುವೆ ಮಾಡಿಕೊಡಲಾಗಿದೆ, ಇನ್ನು ಯಾವುದೇ ಆಸ್ತಿಯನ್ನು ಭಾಗ ಮಾಡುವಂತಿಲ್ಲ ಎಂದು ನರಸಿಂಹಮೂರ್ತಿ ಹೇಳುತ್ತಿದ್ದ.

ಅಲ್ಲದೇ ಆಸ್ತಿ ವಿಚಾರವಾಗಿ ಹಲವು ವರ್ಷಗಳಿಂದ ತಂದೆ ತಾಯಿಗೆ ಹಿಂಸೆ ನೀಡುತ್ತಿದ್ದ ಎಂಬ ಆರೋಪ ಕೇಳಿಬಂದಿದೆ. ತನ್ನ ಹೆಣ್ಣು ಮಕ್ಕಳಿಗೆ ಆಸ್ತಿ ಭಾಗ ನೀಡಬೇಕು ಎಂದು ವೃದ್ಧ ದಂಪತಿ ಹೇಳುತ್ತಿದ್ದು, ಇದೇ ವಿಚಾರವಾಗಿ ಕಳೆದ ಶನಿವಾರ ಸಂಜೆ ನರಸಿಂಹಮೂರ್ತಿ ತಂದೆ ತಾಯಿ ವಾಸವಿದ್ದ ಮನೆಗೆ ಹೋಗಿದ್ದ. ಈ ವೇಳೆ ಜಗಳ ಮಾಡಿ ರಾಮಕೃಷ್ಣಪ್ಪನಿಗೆ ರಾಡ್‌ನಿಂದ ತಲೆಗೆ ಹೊಡೆದು ಕೊಲೆ ಮಾಡಿದ್ದು, ನಂತರ ತಾಯಿಯನ್ನು ದಾರುಣವಾಗಿ ಕೊಲೆ ಮಾಡಿರುವ ಶಂಕೆ ವ್ಯಕ್ತವಾಗಿದೆ.

ಕೊಲೆ ಮಾಡಿ ತಲೆ ಮರೆಸಿಕೊಳ್ಳದೆ ತನಗೆ ಏನು ತಿಳಿಯದ ಹಾಗೆ ನರಸಿಂಹಮೂರ್ತಿ ಮನೆಯಲ್ಲಿಯೇ ಇದ್ದ. ಪ್ರತಿ ದಿನ ತನ್ನ ಹೆಣ್ಣುಮಕ್ಕಳಿಗೆ ವೃದ್ಧ ದಂಪತಿ ಕರೆ ಮಾಡುತ್ತಿದ್ದರು. ಆದರೆ ಶನಿವಾರದಿಂದ ಕರೆ ಮಾಡಿರಲಿಲ್ಲ. ಹೀಗಾಗಿ ಹೆಣ್ಣುಮಕ್ಕಳು ಅನುಮಾನಗೊಂಡಿದ್ದು, ಕೊನೆಯ ಮಗಳು ಶಾಕುಂತಲ ಮನೆಯ ಬಳಿ ಬಂದು ನೋಡಿದ್ದಾರೆ. ಈ ವೇಳೆ ಮನೆ ಬಾಗಿಲಿಗೆ ಬೀಗ ಹಾಕಲಾಗಿತ್ತು. ತಕ್ಷಣ ಶಾಕುಂತಲ ತನ್ನ ತಂದೆ ತಾಯಿಗೆ ಕರೆ ಮಾಡಿದ್ದು, ಇಬ್ಬರ ನಂಬರ್ ಕೂಡಾ ಸ್ವಿಚ್‌ಆಫ್ ಆಗಿತ್ತು. ಈ ಹಿನ್ನೆಲೆ ಶಾಕುಂತಲ ಆತಂಕಗೊಂಡು ಸೂಲಿಬೆಲೆಯಲ್ಲಿ ಇರುವ ತನ್ನ ಅಕ್ಕನ ಮನೆಗೆ ಹೋಗಿ ಮರಳಿ ತಂದೆ ತಾಯಿಯ ಮನೆಯ ಬಳಿ ಬಂದಿದ್ದರು.

ಈ ವೇಳೆ ಮನೆಯ ಹೊರಗಿನ ಬಾತ್ ರೂಂ ಬೀಗ ಯಾರೋ ತೆರೆದಿರುವುದು ಗಮನಿಸಿದ ಅವರು, ತಕ್ಷಣ ಮನೆಯ ಬಾಗಿಲನ್ನು ಒಡೆದು ಒಳಗೆ ಹೋಗಿ ನೋಡಿದಾಗ ಘಟನೆ ಬೆಳಕಿಗೆ ಬಂದಿದೆ. ಬಾಗಿಲ ಬಳಿಯೇ ತಂದೆಯ ಮೃತ ದೇಹ ಮತ್ತು ಅಡುಗೆ ಮನೆಯ ಬಳಿ ತಾಯಿಯ ಮೃತ ದೇಹ ನೋಡಿ ಶಾಕುಂತಲ ಶಾಕ್ ಆಗಿದ್ದು, ಸದ್ಯ ಆರೋಪಿ ನರಸಿಂಹಮೂರ್ತಿಯನ್ನು ವಶಕ್ಕೆ ಪಡೆದು ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ. ಬೆಂಗಳೂರು ಗ್ರಾಮಾಂತರ ಜಿಲ್ಲೆ ಹೊಸಕೋಟೆ ತಾಲೂಕಿನ ಸೂಲಿಬೆಲೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಘಟನಾ ಸ್ಥಳದಲ್ಲಿ ಕುಟುಂಬಸ್ಥರ ಆಕ್ರಂದನ ಮುಗಿಲುಮುಟ್ಟಿದೆ.

Related Articles

Latest Articles