ಬಹುಭಾಷಾ ಖ್ಯಾತ ನಟಿ ಲೀಲಾವತಿ ಅವರ ನಿಧನದ ನೋವು ಹಸಿಯಾಗಿರುವಾಗಲೇ ಮತ್ತೊಂದು ಕಹಿ ಸುದ್ದಿ ಕೇಳಿಬಂದಿದೆ. ಲೀಲಾವತಿ ಅವರನ್ನು ನೋಡಿಕೊಳ್ಳುತ್ತಿದ್ದ ಮಹಿಳೆ ಕೂಡ ಈಗ ಇಹಲೋಕ ತ್ಯಜಿಸಿದ್ದಾರೆ. ಇದು ವಿನೋದ್ ರಾಜ್ ಅವರ ಕುಟುಂಬಕ್ಕೆ ನೋವು ಉಂಟುಮಾಡಿದೆ. ಮೃತ ಮಹಿಳೆಯ ಹೆಸರು ಬಂಗಾರಮ್ಮ. ಚಿಕ್ಕ ವಯಸ್ಸಿನಿಂದಲೂ ಅವರು ಲೀಲಾವತಿ ಜೊತೆ ಇದ್ದರು. ಈಗ ಅವರು ಕೊನೆಯುಸಿರು ಎಳೆದಿದ್ದಾರೆ.
ಬಂಗಾರಮ್ಮ ಅವರಿಗೆ 65 ವರ್ಷ ವಯಸ್ಸಾಗಿತ್ತು. ಲೀಲಾವತಿ ಅವರು ಚೆನೈನಲ್ಲಿ ವಾಸವಾಗಿದ್ದಾಗಿನಿಂದಲೂ ಅವರ ಜೊತೆ ಬಂಗಾರಮ್ಮ ಇದ್ದರು. ಲೀಲಾವತಿ ಎಲ್ಲಿಗೇ ಹೋದರೂ ಕೂಡ ಅವರ ಜೊತೆ ಬಂಗಾರಮ್ಮ ಇರುತ್ತಿದ್ದರು. ಅವರಿಗೆ ಇತ್ತೀಚೆಗೆ ಅನಾರೋಗ್ಯ ಉಂಟಾಗಿತ್ತು. ಬಂಗಾರಮ್ಮ ಅವರು ಕ್ಯಾನ್ಸರ್ನಿಂದ ಬಳಲುತ್ತಿದ್ದರು ಎಂಬ ಮಾಹಿತಿ ಇದೆ.
ಕ್ಯಾನ್ಸರ್ಗೆ ಒಳಗಾಗಿದ್ದ ಬಂಗಾರಮ್ಮ ಅವರನ್ನು ವಿನೋದ್ ರಾಜ್ ಅವರು ನೋಡಿಕೊಳ್ಳುತ್ತಿದ್ದರು. ಅವರಿಗಾಗಿಯೇ ಓರ್ವ ನರ್ಸ್ ನೇಮಿಸಿ, ಆರೈಕೆ ಮಾಡುತ್ತಿದ್ದರು. ಮೈಲನಹಳ್ಳಿ ತೋಟದಲ್ಲಿ ಸುಮಾರು 25 ವರ್ಷಗಳಿಂದ ಲೀಲಾವತಿ ಅವರ ಜೊತೆಗಿದ್ದ ಬಂಗಾರಮ್ಮ ಅವರು ಮಂಗಳವಾರ (ಡಿಸೆಂಬರ್ 12) ರಾತ್ರಿ ನಾಗರಭಾವಿ ಸಮೀಪ ಇರುವ ಆಸ್ಪತ್ರೆಯಲ್ಲಿ ಕೊನೆಯುಸಿರು ಎಳೆದಿದ್ದಾರೆ. ಸೋಲದೇವನಹಳ್ಳಿ ತೋಟದಲ್ಲಿ ವಿನೋದ್ ರಾಜ್ ಅಂತಿಮ ದರ್ಶನ ಪಡೆದಿದ್ದಾರೆ.