ಶಿವಮೊಗ್ಗ: ಇಪ್ಪತ್ತನೇ ವಯಸ್ಸಿಗೆ ಶಿಕ್ಷಕನಾಗಿ ಸೇರಿಕೊಂಡು 16 ವರ್ಷ ಸೇವೆ ಸಲ್ಲಿಸಿ ವರ್ಗಾವಣೆಗೊಂಡ ಪ್ರೀತಿಯ ಗುರುವಿಗೆ ಗ್ರಾಮಸ್ಥರು, ಹಿರಿಯ ವಿದ್ಯಾರ್ಥಿಗಳು ವಿಶೇಷ ಉಡುಗೊರೆ ನೀಡಿ ಅಚ್ಚರಿ ಮೂಡಿಸಿದ್ದಾರೆ. ಶಿಕ್ಷಕ ಮತ್ತು ಅವರ ಪತ್ನಿ ಬೈಕ್ ಹತ್ತಿ ಶಾಲೆ ಬಳಿ ರೌಂಡ್ ಹಾಕುವುದನ್ನು ಕಂಡು ಗ್ರಾಮಸ್ಥರು ಚಪ್ಪಾಳೆ ತಟ್ಟಿ ಸಂಭ್ರಮಿಸಿದ್ದಾರೆ. ನೆಚ್ಚಿನ ಗುರುವಿನ ಬೀಳ್ಕೊಡುಗೆ ನಿಜಕ್ಕೂ ಹೃದಯಸ್ಪರ್ಶಿಯಾಗಿತ್ತು.
ಮೂಲ ವರದಿ: ಶಿವಮೊಗ್ಗ ಲೈವ್
ಸಾಗರ ತಾಲೂಕಿನ ಕುಗ್ರಾಮ ವಳೂರಿನ ಸರ್ಕಾರಿ ಶಾಲೆಯ ಶಿಕ್ಷಕರಾಗಿದ್ದ ಸಂತೋಷ್ ಕಾಂಚನ್ ಅವರು ಕುಂದಾಪುರದ ವಾರಾಹಿ ಸರ್ಕಾರಿ ಶಾಲೆಗೆ ವರ್ಗಾವಣೆಗೊಂಡಿದ್ದಾರೆ. ಶಾಲೆ ಆವರಣದಲ್ಲಿ ಬೀಳ್ಕೊಡುಗೆ ಸಮಾರಂಭ ಆಯೋಜಿಸಲಾಗಿತ್ತು. ಇದು ನಿಜಕ್ಕೂ ಭಾವಸ್ಪರ್ಶಿಯಾಗಿತ್ತು.
ಕುಗ್ರಾಮ ವಳೂರಿನಲ್ಲಿ ಸಂತೋಷ್ ಕಾಂಚನ್ ಅವರು 16 ವರ್ಷ ಶಿಕ್ಷಕರಾಗಿ ಸೇವೆ ಸಲ್ಲಿಸಿದ್ದರು. ಈ ಭಾಗದ ಮಕ್ಕಳ ಶೈಕ್ಷಣಿಕ ಪ್ರಗತಿಗೆ ನೆರವಾಗಿದ್ದರು. ಶಾಲೆ ಅವಧಿ ಮಾತ್ರವಲ್ಲದೆ ಮಕ್ಕಳಿಗೆ ಹಗಲು ರಾತ್ರಿ ಪಾಠ ಮಾಡುತ್ತಿದ್ದರು. ಹಾಗಾಗಿ ಇಲ್ಲಿ ಓದಿದವರು ವಿವಿಧೆಡೆ ಉನ್ನತ ವ್ಯಾಸಂಗಕ್ಕೆ ತೆರಳಿದ್ದಾರೆ. ಇನ್ನು, ತುರ್ತು ಸಂದರ್ಭಗಳಲ್ಲಿ ಗ್ರಾಮಸ್ಥರಿಗು ಸಂತೋಷ್ ಕಾಂಚನ್ ನೆರವಾಗಿದ್ದರು. ವಿದ್ಯಾರ್ಥಿಗಳು ಮತ್ತು ಗ್ರಾಮಸ್ಥರ ಮನ ಗೆದ್ದಿದ್ದ ಸಂತೋಷ್ ಕಾಂಚನ್ ಅವರ ವರ್ಗಾವಣೆ ಗ್ರಾಮಸ್ಥರ ಹೃದಯವನ್ನು ಭಾರಗೊಳಿಸಿತ್ತು.
ಸಂತೋಷ್ ಕಾಂಚನ್ ಅವರಿಗೆ ಗ್ರಾಮಸ್ಥರು ವಿಭಿನ್ನವಾಗಿ ಬೀಳ್ಕೊಡುಗೆ ನೀಡಲು ಯೋಜಿಸಿದ್ದರು. ಅದರಂತೆ ಅವರಿಗೆ ಪಲ್ಸರ್ ಬೈಕ್ ಉಡುಗೊರೆಯಾಗಿ ನೀಡಿದ್ದಾರೆ. ‘ನಮ್ಮೂರಿನಲ್ಲಿ ಯಾವುದೆ ವಾಹನಗಳು ಇಲ್ಲದಿದ್ದಾಗ ಶಿಕ್ಷಕ ಸಂತೋಷ್ ಕಾಂಚನ್ ಅವರು ತಮ್ಮ ಬೈಕಿನಲ್ಲೆ ಮಕ್ಕಳನ್ನು ಪ್ರತಿಭಾ ಕಾರಂಜಿಗೆ ಕರೆದೊಯ್ಯುತ್ತಿದ್ದರು. ಅವರ ಬೈಕ್ ಊರಿನ ಪಾಲಿಗೆ ಬೈಕ್ ಆಂಬುಲೆನ್ಸ್ ಆಗಿತ್ತು. ರಾತ್ರಿ, ಹಗಲೆನ್ನದೆ ಊರಿನವರಿಗೆ ನೆರವಾಗಿದ್ದಾರೆ. ನಮ್ಮ ಮಕ್ಕಳನ್ನು ಶಾಲೆಗೆ ಕರೆದೊಯ್ದು ಪಾಠ ಕಲಿಸಿದ್ದಾರೆ. ಅವರು ವರ್ಗಾವಣೆ ಆಗಿರುವುದು ಬೇಸರ ತಂದಿದೆ’ ಅನ್ನುತ್ತಾರೆ ಎಸ್‌ಡಿಎಂಸಿ ಅಧ್ಯಕ್ಷ ಹೆಚ್.ಎನ್.ಮಂಜುನಾಥ್.
ವಳೂರು ಸರ್ಕಾರಿ ಶಾಲೆ ಎಲ್ಲ ನಗರ, ಪಟ್ಟಣಗಳಿಂದಲು ಬಹು ದೂರದಲ್ಲಿದೆ. ಸಾಗರ ತಾಲೂಕು ಕೇಂದ್ರದಿಂದ 80 ಕಿ.ಮೀ, ಹೊಸನಗರದಿಂದ 85 ಕಿ.ಮೀ ದೂರದಲ್ಲಿದೆ. ದಟ್ಟ ಕಾಡಿನ ಮಧ್ಯದಲ್ಲಿ, ಯಾವುದೆ ಸೌಲಭ್ಯಗಳಿಲ್ಲದ ಶಾಲೆಗೆ 2007ರಲ್ಲಿ ಸಂತೋಷ್ ಕಾಂಚನ್ ಶಿಕ್ಷಕರಾಗಿ ಬಂದರು. ಶಾಲೆಯಲ್ಲೇ ಉಳಿದುಕೊಂಡು ಮಕ್ಕಳಿಗೆ ಪಾಠ ಮಾಡುತ್ತಿದ್ದರು. ‘ಕೌಟುಂಬಿಕ ಕಾರಣಕ್ಕೆ ವರ್ಗಾವಣೆಯಾಗುತ್ತಿದ್ದೇನೆ. ಊರಿನವರು ಬಯಸಿದರೆ ಭಾನುವಾರವಾದರು ಬಂದು ಮಕ್ಕಳಿಗೆ ಬೋಧನೆ ಮಾಡುತ್ತೇನೆ. ಊರಿನವರು ಮತ್ತು ಮಕ್ಕಳ ಋಣ ತೀರಿಸಲು ಸಾಧ್ಯವಿಲ್ಲʼ ಅನ್ನುತ್ತಾರೆ ಶಿಕ್ಷಕ ಸಂತೋಷ್ ಕಾಂಚನ್.
ಗ್ರಾಮಸ್ಥರು, ಹಿರಿಯ ವಿದ್ಯಾರ್ಥಿಗಳೆಲ್ಲ ಸೇರಿ ಬೈಕ್ ಉಡುಗೊರೆಯಾಗಿ ನೀಡಿ ಶಿಕ್ಷಕರೊಬ್ಬರಿಗೆ ಬೀಳ್ಕೊಡುಗೆ ನೀಡಿರುವುದು ವಿಭಿನ್ನವಾಗಿದೆ. ಊರಿನವರ ಮನಸಲ್ಲಿ ಶಿಕ್ಷಕ ಸಂತೋಷ್ ಕಾಂಚನ್ ಅಚ್ಚಾಗಿ ಉಳಿದಿರುವುದಕ್ಕೆ ಇದು ಸಾಕ್ಷಿಯಾಗಿದೆ.