ಶ್ರೀ ರಾಮ
ರಾಮನ ಮಹಿಮೆಯ ಹೇಳಲು ಹೊರಟಿಹೆ
ನಾಮವ ಧ್ಯಾನಿಸಿ ಮನದಲ್ಲಿ.
ಶಾಮಕ ಗುಣವಿದೆ ಸ್ಮರಿಸಲು ನಿನ್ನನು
ನಾಮದ ಬಲದಲಿ ಸುಖವಿಲ್ಲಿ .
ದಶರಥ ಕಂದನ ತ್ಯಾಗವು ಹಿರಿದಿದೆ
ಕುಶಲವ ಪಿತನಿವ ಹೆಸರಾದ .
ಹಸಿತವ ತೋರುತ ಮೊಗದಲಿ ರಾಮನು
ಎಸೆಯುತ ಸುತ್ತಲು ಬೆಳಕಾದ .
ತಂದೆಯ ಮಾತನು ಪಾಲಿಸೆ ಬದ್ಧನು
ಸಂದೆಹವಿಲ್ಲದೆ ನಿಷ್ಕಾಮ .
ಬಂಧನ ವನದಲಿ ತಾಳಿದ ದುರಿತವ
ಸುಂದರ ಪುರುಷನು ಶ್ರೀ ರಾಮ .
ತಾರಕ ರಾಮ
ರಾಮನ ಮಂದಿರ ಧಾಮವು ಸುಂದರ
ರಾಮನ ನೆಲೆಯು ಹೆದೆಯಲ್ಲಿ..
ಮಾದರಿಯಾದವ ಮಾಧವನೀತನು
ಯೋಧನು ರಾಮ ನಿಷ್ಕಾಮ ..
ಸೀತೆಯ ಪತಿ ದೇವ ನೀತಿಯ ಪಾಲಿಸಿ
ಭೀತಿಯನಳಿಸಿ ಭಗವಂತ..
ಮದಿಸಿದ ದುಷ್ಟರ ವಧೆಯನು ಗೈಯುತ
ಹೆದೆಯಲಿ ಬಾಣ ತುಂಬುತ್ತ..
ತಂದೆಯ ಮಾತನು ಸಂದೆಯವಿಲ್ಲದೆ
ತಂದವ ನಿಜಕು ಬನದಲ್ಲಿ..
ನಡೆಯುತ ಕಾಡಿಗೆ ಬಿಡದಿಯ ಕಟ್ಟಿದ
ಮಡದಿಯ ಸಹಿತ ವನವಾಸ..
ಕುಶಲವ ಕಂದರ ಕುಶಲವ ನೋಡಿದ
ಕುಶಲನು ರಾಮ ದೊರೆಯಾಗಿ..
ರಾಮನ ಮಂತ್ರಕೆ ಶಾಮಕ ಗುಣವಿದೆ
ನಾಮದಿ ದನಿಯು ಗಣಿಯಂತೆ.
ಬಾಲರಾಮನ ಮೂರ್ತಿ ತಾಳಿರೆ ಹಾಸವ
ಫಾಲದಿ ತಿಲಕ ಮಣಿಯಂತೆ..
ತಾರಕ ರಾಮನೆ ಧಾರಣ ಶಕ್ತಿಯ
ಧಾರೆಯನೆರೆಯೊ ನಮಗಾಗಿ..
ತಾರಕ=ಸಂರಕ್ಷಕ, ಧಾಮ=ಮನೆ/ಬಿಡದಿ, ಹೆದೆ = ಮನಸ್ಸು/ಹೃದಯ/ಬಾಣಕ್ಕೆ ಆಧಾರವಾದ ದಾರ, ಸಂದೆಯ=ಸಂದೇಹ, ಕುಶಲವ= ರಾಮನ ಮಕ್ಕಳ ಹೆಸರು/ ಕ್ಷೇಮ /ಕೌಶಲ್ಯ, ಫಾಲ = ಹಣೆ/ನೊಸಲು
ಬರಹ: ಗುಣಾಜೆ ರಾಮಚಂದ್ರ ಭಟ್