ಮಂಡ್ಯ ಜಿಲ್ಲೆಯ ಕೆರಗೋಡು ಗ್ರಾಮದ ಒಂದು ಧ್ವಜಸ್ಥಂಭ ಇಡೀ ರಾಜ್ಯದಲ್ಲೇ ಕಿಚ್ಚು ಹಚ್ಚಿಸಿದೆ. ಕೆರಗೋಡು ಗ್ರಾಮದಲ್ಲಿ ಅಧಿಕಾರಿಗಳು ಬಂದು ಹನುಮನ ಧ್ವಜ ಕೆಳಗಿಳಿಸಿ, ಪೊಲೀಸರ ಭದ್ರತೆಯಲ್ಲಿ ರಾಷ್ಟ್ರಧ್ವಜ ಹಾರಿಸಿದ್ದರು.
ಇದರ ವಿರುದ್ಧ ಬಿಜೆಪಿ ಪ್ರತಿಭಟನೆ ನಡೆಸಿತ್ತು. ಇದರ ನಡುವೆ ಪೊಲೀಸರು ಪ್ರತಿಭಟನಾಕಾರರ ಲಾಟಿ ಚಾರ್ಜ್ ಕೂಡ ಮಾಡಿದ್ದರು. ಇಷ್ಟೆಲ್ಲಾ ಬೆಳವಣಿಗಳ ನಡುವೆ ಬೆಂಗಳೂರಿನಲ್ಲೂ ಬಾವುಟ ವಿಚಾರ ಮುನ್ನೆಲೆ ಬಂದಿದೆ. ಈ ಬಗ್ಗೆ ಕೂಡಲೇ ಎಚ್ಚೆತ್ತುಕೊಂಡ ಪೊಲೀಸರು ವಿಚಾರ ದೊಡ್ಡದಾಗುವ ಮುನ್ನವೇ ಫುಲ್ಸ್ಟಾಪ್ ಹಾಕಿದ್ದಾರೆ.
ಬೆಂಗಳೂರಿನ ಶಿವಾಜಿನಗರದಲ್ಲಿ ಹಸಿರು ಬಾವುಟ ಹಾರಾಟದ ಫೋಟೋವನ್ನು ಬಿಜೆಪಿ ಹಿರಿಯ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹಂಚಿಕೊಂಡಿದ್ದರು. ಶಿವಾಜಿ ನಗರದ ಚಾಂದಿನಿ ಚೌಕ್ ನಲ್ಲಿ ಬಾವುಟ ಹಾರಾಟ ಮಾಡಲಾಗಿತ್ತು. ಈ ಕುರಿತ ಫೋಟೋವನ್ನು ರಾಮಚಂದ್ರ ಯರ್ಗಾಲ್ ಎಂಬವರು ಎಕ್ಸ್ ನಲ್ಲಿ ಹಂಚಿಕೊಂಡಿದ್ದರು. ಈ ಪೋಸ್ಟ್ಅನ್ನು ರೀ ಟ್ವೀಟ್ ಮಾಡಿದ್ದ ಯತ್ನಾಳ್ ಅವರು, ಬೆಂಗಳೂರು ನಗರ ಪೊಲೀಸ್ ಕಮಿಷನರ್ ಹಾಗೂ ಬೆಂಗಳೂರು ಪೂರ್ವ ಡಿಸಿಪಿ ಅವರನ್ನು ಟ್ಯಾಗ್ ಮಾಡಿ ಪ್ರಶ್ನಿಸಿದ್ದರು.
ಯತ್ನಾಳ್ ಅವರ ಟ್ವೀಟ್ ಬೆನ್ನಲ್ಲೇ ಎಚ್ಚೆತ್ತುಕೊಂಡಿರುವ ಶಿವಾಜಿನಗರ ಪೊಲೀಸರು, ಹಸಿರು ಬಾವುಟ ತೆಗೆಸಿ ರಾಷ್ಟ್ರ ಧ್ವಜ ಭಾವುಟ ಹಾರಿಸಿದ್ದಾರೆ. ಅಲ್ಲದೇ ಸ್ಥಳಕ್ಕೆ ಶಿವಾಜಿನಗರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಬಿಬಿಎಂಪಿ ಸ್ತಂಭದಲ್ಲಿ ಹಸಿರು ಬಾವುಟ ಹಾರಾಟ ಬಗ್ಗೆ ಸಾಮಾಜಿಕ ಜಾಲತಾಣ ಎಕ್ಸ್ನಲ್ಲಿ ಹಿಂದೂ ಸಂಘಟನೆ ವಿರೋಧ ವ್ಯಕ್ತಪಡಿಸಿ, ಬಾವುಟ ತೆರವು ಮಾಡಲು ಆಗ್ರಹಿಸಿತ್ತು.