ಇತ್ತೀಚೆಗೆ ಪ್ರಾಣ ಪ್ರತಿಷ್ಠಾಪನೆಗೊಂಡ ಬಾಲರಾಮನ ದರ್ಶನಕ್ಕೆ ಲಖನೌದಿಂದ 350 ಮುಸ್ಲಿಂ ಭಕ್ತರು ಅಯೋಧ್ಯೆವರೆಗೆ 6 ದಿನಗಳ ಪಾದಯಾತ್ರೆ ನಡೆಸಿದ್ದಾರೆ.
ರಾಷ್ಟ್ರೀಯ ಸ್ವಯಂ ಸೇವ ಸಂಘದ (RSS) ಮುಸ್ಲಿಂ ಸಂಘಟನೆಯಾದ ಮುಸ್ಲಿಂ ರಾಷ್ಟ್ರೀಯ ಮಂಚ್ (MRM) ನೇತೃತ್ವದಲ್ಲಿ ಜ. 25ರಂದು ಈ ಯಾತ್ರೆ ಆರಂಭಗೊಂಡಿತ್ತು ಎಂದು ಮಂಚ್‌ನ ವಕ್ತಾರ ಶಾಹಿದ್ ಸಯೀದ್ ಬುಧವಾರ ತಿಳಿಸಿದ್ದಾರೆ.
”ಜೈ ಶ್ರೀರಾಮ್’ ಘೊಷಣೆಯೊಂದಿಗೆ ಹೆಜ್ಜೆ ಹಾಕಿದ ಈ ತಂಡ, ಮಂಗಳವಾರ ಅಯೋಧ್ಯೆ ತಲುಪಿತು. ವಿಪರೀತ ಚಳಿಯ ನಡುವೆಯೂ ಸುಮಾರು 150 ಕಿ.ಮೀ. ದೂರವನ್ನು ಪಾದಯಾತ್ರೆ ಮೂಲಕ ಇವರು ಕ್ರಮಿಸಿದ್ದಾರೆ. ಪ್ರತಿದಿನ 25 ಕಿ.ಮೀ. ದೂರ ಕ್ರಮಿಸಿ ರಾತ್ರಿ ತಂಗುತ್ತಿದ್ದರು. ಮರುದಿನ ಬೆಳಿಗ್ಗೆ ಪಾದಯಾತ್ರೆ ಆರಂಭಿಸುತ್ತಿದ್ದರು’ ಎಂದು ವಿವರಿಸಿದ್ದಾರೆ.
‘ಬರಿಗಾಲಲ್ಲೇ ಹೆಜ್ಜೆ ಹಾಕಿದ ಈ ತಂಡ, ಅಯೋಧ್ಯೆ ತಲುಪಿ ಬಾಲರಾಮನ ದರ್ಶನ ಪಡೆದು, ವಿಶೇಷ ಪೂಜೆ ಸಲ್ಲಿಸಿದರು’ ಎಂದು ಸಯೀದ್ ಹೇಳಿದ್ದಾರೆ.
ಪಾದಯಾತ್ರೆಯಲ್ಲಿ ಪಾಲ್ಗೊಂಡ ಭಕ್ತರು ಈ ದಿವ್ಯ ದರ್ಶನವನ್ನು ‘ಇಮಾನ್ ಎ ಹಿಂದ್ ರಾಮ್’ ಎಂದು ಬಣ್ಣಿಸಿದ್ದಾರೆ. ಈ ಯಾತ್ರೆಯು ಏಕತೆ, ಭಾವೈಕ್ಯತೆ, ಸಾರ್ವಭೌಮತ್ವ ಹಾಗೂ ಸಾಮರಸ್ಯವನ್ನು ಸಾರಿದೆ’ ಎಂದಿದ್ದಾರೆ.
‘ಭಗವಾನ್ ರಾಮನು ನಮ್ಮೆಲ್ಲರ ಪೂರ್ವಜ’ ಎಂದು ದರ್ಶನ ಪಡೆದ ಎಂಆರ್‌ಎಂನ ಸಂಚಾಲಕ ರಾಜಾ ರಯೀಸ್ ಹಾಗೂ ಪ್ರಾಂತ್ಯ ಸಂಯೋಜಕ ಶೇರ್ ಅಲಿ ಖಾನ್ ಹೇಳಿದ್ದಾರೆ.
‘ದೇಶ ಪ್ರೇಮ ಹಾಗೂ ಮನುಷ್ಯತ್ವ ಎಂಬುದು ಧರ್ಮ, ಜಾತಿ ಹಾಗೂ ವರ್ಣಗಳಿಗೂ ಮೀರಿದ್ದು. ಮತ್ತೊಬ್ಬರ ಟೀಕೆ, ಅಪಹಾಸ್ಯ ಅಥವಾ ತಿರಸ್ಕಾರವನ್ನು ಯಾವ ಧರ್ಮವೂ ಬೋಧಿಸುವುದಿಲ್ಲ’ ಎಂದು ರಯೀಸ್ ಅಭಿಪ್ರಾಯಪಟ್ಟಿದ್ದಾರೆ.