ಕೊಳವೆ ಬಾವಿಗೆ ಬಿದ್ದ ಪುಟ್ಟ ಪೋರ ಸಾತ್ವಿಕ್ ಬದುಕಿ ಬಂದ ಘಟನೆ ಇಡೀ ನಾಡಿನಲ್ಲೇ ಅಚ್ಚರಿಗೆ ಕಾರಣವಾಗಿದೆ. 21 ಗಂಟೆಗಳ ಕಾಲ ಸಾವು ಬದುಕಿನ ಮಧ್ಯೆ ಸೆಣಸಾಡಿ ಸಾತ್ವಿಕ ಸಾವು ಗೆಲ್ಲಲು, ಸಿದ್ದಲಿಂಗರಿಗೆ ಹೊತ್ತಿದ್ದ ಹರಕೆ ಕಾರಣ ಅಂತ ಇಡೀ ಊರೇ ಸಂಭ್ರಮಿಸುತ್ತಿದೆ. ಹತ್ತಾರು ಮಂದಿ ಜೀವ ರಕ್ಷಕರ ಶ್ರಮ ಒಂದೆಡೆಯಾದರೆ ದೇವರ ಕರುಣೆಯ ಬಗ್ಗೆಯೂ ಶ್ಲಾಘನೆ ವ್ಯಕ್ತವಾಗಿದೆ. ರಕ್ಷಕರ ತಂಡವೇ ದೇವರ ರೂಪದಲ್ಲಿ ಬಂದು ಪುಟ್ಟ ಬಾಲಕನನ್ನು ಯಮರಾಯನಿಂದ ರಕ್ಷಿಸಿದ್ದಾರೆ.

ಬರೋಬ್ಬರಿ 21 ಗಂಟೆಗಳ ಅವಿರಥ ಪ್ರಯತ್ನ. ಕೋಟಿ ಕೋಟಿ ಕನ್ನಡಿಗರ ಪ್ರಾರ್ಥನೆ. ಸಾವು ಬದುಕಿನ ಮಧ್ಯೆ ಹೋರಾಡಿ ಸಾತ್ವಿಕ್ ಮೃತ್ಯುಂಜಯನಾಗಿ ಬರಲು ಕಾರಣವಾಗಿತ್ತು. ವಿಜಯಪುರ ಜಿಲ್ಲೆಯ ಇಂಡಿ ತಾಲ್ಲೂಕಿನ ಲಚ್ಯಾಣ ಗ್ರಾಮದಲ್ಲಿ ಕೊಳವೆ ಬಾವಿಯೊಂದು ತಂದೊಡ್ಡಿದ ಕಂಟಕವನ್ನ ಗೆದ್ದು ಬಂದ ಸಾತ್ವಿಕ್ ದೇವರ ಪವಾಡಕ್ಕೆ ಸಾಕ್ಷಿಯಾಗಿತ್ತು.
ಲಚ್ಯಾಣ.. ಪವಾಡ ಪುರುಷ ಸಿದ್ದಲಿಂಗ ಮಹಾರಾಜರು ನಡೆದಾಡಿದ ಪುಣ್ಯ ಭೂಮಿ.. ಪವಾಡಗಳ ಮೂಲಕವೇ ಭಕ್ತರ ಸಂಕಷ್ಟಗಳಿಂದ ದೂರ ಮಾಡಿರುವ ಮಹಾಮಹಿಮ ಸಿದ್ಧಿ ಪುರುಷ. ಕೊಳವೇ ಬಾವಿಗೆ ಬಿದ್ದು ಸಾವನ್ನೇ ಗೆದ್ದು ಬಂದಿರುವ ಸಾತ್ವಿಕ್ 21 ಗಂಟೆ ಬಳಿಕವೂ ಕೊಳವೆ ಬಾವಿಯಿಂದ ಸೇಫ್ ಬಂದಿರೋದು ಪವಾಡಕ್ಕೆ ಸಾಕ್ಷಿಯಾಗಿದೆ. 2 ವರ್ಷದ ಸಾತ್ವಿಕ್ ಕೊಳವೆ ಬಾವಿಯೊಳಗೆ ಬಿದ್ದ ಬಳಿಕ ನನ್ನ ಕಂದಮ್ಮನನ್ನ ಕಾಪಾಡು ದೇವರೇ ಅಂತ ಹೆತ್ತ ತಾಯಿ ಪೂಜಾ ತಮ್ಮೂರಿನ ಪವಾಡ ಪುರುಷ ಸಿದ್ದಲಿಂಗ ಮಹಾರಾಜರಿಗೆ ಹರಕೆ ಹೊತ್ತಿದ್ದರು. ಕೊನೆಗೂ ಹೆತ್ತ ತಾಯಿಯ ಕೂಗು ಕೇಳಿಸಿಕೊಂಡ ಸಿದ್ದಲಿಂಗ ಮಹಾರಾಜರು ಪುಟ್ಟ ಕಂದಮ್ಮನ ಕಾಪಾಡಿ ತಾಯಿ ಮಡಿಲಿಗೆ ಮರಳಿಸಿದ್ದಾರೆ.

ಸಾತ್ವಿಕ್ ಸುರಕ್ಷಿತವಾಗಿ ಮರಳಿ ಬಂದರೆ ನಿನ್ನ ಹೆಸರನ್ನೇ ಮಗನಿಗೆ ಮರುನಾಮಕರಣ ಮಾಡುತ್ತೇನೆ ಅಂತ ಸಾತ್ವಿಕ್ ತಾಯಿ ಪೂಜ, ಸಿದ್ದಲಿಂಗ ಮಹಾರಾಜರ ಬಳಿ ಹರಕೆ ಹೊತ್ತಿದ್ದರು.

ಇನ್ನೊಂದೆಡೆ ಗ್ರಾಮಸ್ಥರು ನಿನ್ನೆ ಬೆಳಿಗ್ಗೆಯಿಂದಲೇ ಪವಾಡ ಪುರುಷನಿಗೆ ರುದ್ರಾಭಿಷೇಕ, ವಿಶೇಷ ಪೂಜೆ ಸಲ್ಲಿಸಿ ಪ್ರಾರ್ಥಿಸಿದ್ರು.. ಹೆತ್ತ ಕರುಳುನಿ ಕೂಗು, ಗ್ರಾಮಸ್ಥರ ಪ್ರಾರ್ಥನೆಗೆ ಮತಸೋತ ಸಿದ್ದಲಿಂಗರು ಪುಟ್ಟ ಕಂದನಿಗೆ ಮರುಜನ್ಮ ನೀಡಿದ್ದಾರೆ. ಇನ್ನು 20 ದಿನದಲ್ಲಿ ನಡೆಯಲಿರೋ ಜಾತ್ರೆ ವೇಳೆ ಸಾತ್ವಿಕ ಸಿದ್ದಲಿಂಗ ಎಂದು ಮರುನಾಮಕರಣ ನಡೆಯಲಿದೆ. ಸಾತ್ವಿಕ್ ಅಜ್ಜ ಶಂಕ್ರಪ್ಪ ಮೊಮ್ಮಗ ಸುರಕ್ಷಿತವಾಗಿ ಹೊರಬರಲಿ ಅಂತ ಸಿದ್ದಲಿಂಗ ಮಹಾರಾಜರಿಗೆ 1 ಕ್ವಿಂಟಾಲ್ ಗೋಧಿ ಮಠಕ್ಕೆ ಕೊಡುವ ಹರಕೆ ಹೊತ್ತಿದ್ದಾರೆ.