Saturday, May 24, 2025

ಸಮುದ್ರ ತೀರದಲ್ಲಿ ಮೈಮರೆತ ಪ್ರೇಮಿಗಳು; ಪ್ರಿಯಕರ ನೋಡುತ್ತಿದ್ದಂತೆ ಅಲೆಗಳಲ್ಲಿ ಕೊಚ್ಚಿ ಹೋದ ಯುವತಿ‌

ಸಮುದ್ರ ತೀರದಲ್ಲಿ ಅಲೆಗಳ ಜೊತೆ ಆಟ ಆಡುತ್ತಿದ್ದಾಗ ಜೋಡಿಗೆ ಅಲೆಗಳೇ ಯಮನಂತೆ ಎರಗಿದ ಘಟನೆ ನಡೆದಿದ್ದು, ಈ ಘಟನೆಗೆ ಸಂಬಂಧಿಸಿದ ವಿಡಿಯೋ ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಹರಿದಾಡುತ್ತಿದೆ.

ಹವಾಮಾನ ವೈಪರಿತ್ಯದಿಂದ ಸಮುದ್ರದಲ್ಲಿ ಅಲೆಗಳ ಅಬ್ಬರ ಹೆಚ್ಚಾಗಿ ಈ ಅವಘಡ ಸಂಭವಿಸಿದೆ. ಭಯಾನಕ ಅಲೆಗಳ ನಡುವೆ ಆಡುವ ದುಸ್ಸಾಹಸಕ್ಕೆ ಕೈ ಹಾಕಿ ಪ್ರಿಯಕರ ಪ್ರಿಯತಮೆಯನ್ನು ಕಳೆದುಕೊಂಡಿದ್ದಾನೆ. ಜೋಡಿಯೊಂದು ಪ್ರಕ್ಷುಬ್ಧ ಸಮುದ್ರದಲ್ಲಿ ರೊಮ್ಯಾನ್ಸ್‌ ಮಾಡುತ್ತಾ ನಿಂತಿದ್ದು, ಭಯಾನಕ ಅಲೆಗಳ ಹೊಡೆತಕ್ಕೆ ಯುವತಿ ತನ್ನ ಪ್ರಿಯಕರನ ಮುಂದೆಯೇ ಕೊಚ್ಚಿ ಹೋಗಿದ್ದಾಳೆ.

ಈ ಘಟನೆ ರಷ್ಯಾದ ಲಿಪೆಟ್ಸ್ಕ್‌ ನಗರದಲ್ಲಿ ನಡೆದಿದ್ದು, ಇಲ್ಲಿನ ಬೀಚ್‌ ಒಂದರಲ್ಲಿ ಪ್ರೇಮಿಗಳಿಬ್ಬರು ರೊಮ್ಯಾನ್ಸ್‌ ಮಾಡುತ್ತಿದ್ದ ವೇಳೆ 20 ವರ್ಷದ ಯುವತಿ ತನ್ನ ಗೆಳೆಯನ ಮುಂದೆಯೇ ಭಯಾನಕ ಅಲೆಗಳ ಹೊಡೆತಕ್ಕೆ ಸಿಲುಕಿ ಕೊಚ್ಚಿ ಹೋಗಿದ್ದಾಳೆ. ಎಷ್ಟೇ ಪ್ರಯತ್ನ ಪಟ್ಟರೂ ಆಕೆಯ ಪ್ರಾಣವನ್ನು ರಕ್ಷಿಸಲು ಸಾಧ್ಯವಾಗಲಿಲ್ಲ. ಪ್ರವಾಸಿಗರು ಸಮುದ್ರ ತಟದಲ್ಲಿ ಆಟವಾಡಬಾರದು ಎಂದು ಎಚ್ಚರಿಕೆಯನ್ನು ನೀಡಲಾಗಿತ್ತು. ಆದರೆ ಎಷ್ಟೇ ಎಚ್ಚರಿಕೆ ನೀಡಿದ್ರೂ ಕೆಲವೊಬ್ಬರು ಇಂತಹ ಸಾಹಸಕ್ಕೆ ಕೈ ಹಾಕಿ ಕೈ ಸುಡುವಂತಾಗಿದೆ.

ಈ ವಿಡಿಯೋವನ್ನು @Collinrugg ಹೆಸರಿನ ಎಕ್ಸ್‌ ಖಾತೆಯಲ್ಲಿ ಹಂಚಿಕೊಳ್ಳಲಾಗಿದ್ದು, ವೈರಲ್‌ ವಿಡಿಯೋದಲ್ಲಿ ಪ್ರೇಮಿಗಳಿಬ್ಬರು ಸಮುದ್ರದ ಅಲೆಗಳ ಮಧ್ಯೆ ಕೈ ಕೈ ಹಿಡಿದು ನಡೆಯುತ್ತಾ, ಮುದ್ದಾಡುತ್ತಿರುವ ದೃಶ್ಯವನ್ನು ಕಾಣಬಹುದು. ಹೀಗೆ ಒಬ್ಬರಿಗೊಬ್ಬರು ಮುತ್ತಿಡುತ್ತಿದ್ದ ವೇಳೆ ಭಯಾನಕ ಅಲೆಗಳ ಹೊಡೆತಕ್ಕೆ ಸಿಲುಕಿ ಆ ಯುವತಿ ನೀರಿನಲ್ಲಿ ಕೊಚ್ಚಿ ಹೋಗಿದ್ದಾಳೆ. ಆಕೆಯ ಗೆಳೆಯ ಎಷ್ಟೇ ಪ್ರಯತ್ನ ಪಟ್ಟರೂ ಆಕೆಯನ್ನು ರಕ್ಷಿಸಲು ಸಾಧ್ಯವಾಗಲಿಲ್ಲ.

ಒಂದು ದಿನದ ಹಿಂದೆ ಹಂಚಿಕೊಳ್ಳಲಾದ ಈ ವಿಡಿಯೋ 17.2 ಮಿಲಿಯನ್‌ ವೀಕ್ಷಣೆಗಳನ್ನು ಪಡೆದುಕೊಂಡಿದ್ದು, ಈ ಭಯಾನಕ ವಿಡಿಯೋ ನೋಡಿ ಸಮುದ್ರದಲ್ಲಿ ಪ್ರಕ್ಷುಬ್ಧ ಪರಿಸ್ಥಿತಿ ಉಂಟಾದಾಗ ಇಂತಹ ಹುಚ್ಚಾಟಗಳನ್ನು ಮಾಡಬಾರದು ಎಂದು ಅವರಿಗೆ ತಿಳಿದಿಲ್ಲವೇ ಎಂದು ನೆಟ್ಟಿಗರು ಪ್ರಶ್ನಿಸಿದ್ದಾರೆ.

Related Articles

Latest Articles