Sunday, December 8, 2024

“ಅಭಿನವ ಕೋಟಿ” ಖ್ಯಾತಿಯ ಕೆ.ಎಚ್ ದಾಸಪ್ಪ ರೈಯವರಿಗೆ “ಅಂಬುರುಹ ಯಕ್ಷಸದನ ಪ್ರಶಸ್ತಿ”

ಉಳ್ಳಾಲ: ಅಂಬುರುಹ ಯಕ್ಷಸದನ ಪ್ರತಿಷ್ಠಾನ ಬೊಟ್ಟಿಕೆರೆ (ರಿ.) ಮಂಜನಾಡಿ ಸಂಸ್ಥೆಯ 2024 ನೇ ಸಾಲಿನ ಅಭಿನವ ವಾಲ್ಮೀಕಿ, ಯಕ್ಷಗಾನ ಸವ್ಯಸಾಚಿ ಬೊಟ್ಟಿಕೆರೆ ಪುರುಷೋತ್ತಮ ಪೂಂಜ ಸಂಸ್ಮರಣಾರ್ಥ ಅಂಬುರುಹ ಯಕ್ಷಸದನ ಪ್ರಶಸ್ತಿಗೆ ತೆಂಕುತಿಟ್ಟು ಯಕ್ಷಗಾನ ರಂಗದ ಅಭಿನವ ಕೋಟಿ ಖ್ಯಾತಿಯ ಕಲಾವಿದ ಶ್ರೀ ಕೆ.ಎಚ್. ದಾಸಪ್ಪ ರೈ ಆಯ್ಕೆಗೊಂಡಿದ್ದಾರೆ.

ಅಂಬುರುಹ ಯಕ್ಷಸದನ ಪ್ರಶಸ್ತಿಯು 10 ಸಾವಿರ ರೂ. ನಗದು, ಪ್ರಶಸ್ತಿ ಪತ್ರ, ಸ್ಮರಣಿಕೆ ಮತ್ತು ಸನ್ಮಾನವನ್ನು ಒಳಗೊಂಡಿದ್ದು ಪ್ರಶಸ್ತಿ ಪ್ರದಾನ ಕಾರ್ಯಕ್ರಮ ಬೊಟ್ಟಿಕೆರೆ ಪುರುಷೋತ್ತಮ ಪೂಂಜರ ಹುಟ್ಟು ಹಬ್ಬದ ದಿನ ಜೂ.21 ರಂದು ಶುಕ್ರವಾರ ಸಂಜೆ 6.00 ಗಂಟೆಗೆ ಪೂಂಜರ ಮನೆ ಅಂಬುರುಹದಲ್ಲಿ ನಡೆಯಲಿದೆ ಎಂದು ಪ್ರತಿಷ್ಠಾನದ ಅಧ್ಯಕ್ಷೆ ಶ್ರೀಮತಿ ಶೋಭಾ ಪುರುಷೋತ್ತಮ ಪೂಂಜ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಪ್ರತಿಷ್ಠಾನದ ಅಧ್ಯಕ್ಷೆ ಶ್ರೀಮತಿ ಶೋಭಾ ಪುರುಷೋತ್ತಮ ಪೂಂಜ ನೇತೃತ್ವದ ಆಯ್ಕೆ ಸಮಿತಿಯು ಪ್ರತಿಷ್ಠಾನದ ಉಪಾಧ್ಯಕ್ಷ ರಾಜಾರಾಮ ಹೊಳ್ಳ ಕೈರಂಗಳ, ಪ್ರಧಾನ ಕಾರ್ಯದರ್ಶಿ ದೀವಿತ್ ಎಸ್ ಕೆ ಪೆರಾಡಿ, ಕೋಶಾಧಿಕಾರಿ ಪುಷ್ಪರಾಜ ಶೆಟ್ಟಿ ಮರಿಕ್ಕಳ ಅವರನ್ನು ಒಳಗೊಂಡಿದೆ.

ಅಂಬುರುಹ ಯಕ್ಷಸದನ ಪ್ರತಿಷ್ಠಾನವು ಈ ಹಿಂದೆ ಛಾಂದಸ ಗಣೇಶ ಕೊಲೆಕಾಡಿ, ಭಾಗವತ ಕುರಿಯ ಗಣಪತಿ ಶಾಸ್ತ್ರಿ, ಹಾಸ್ಯ ಕಲಾವಿದ ಬಂಟ್ವಾಳ ಜಯರಾಮ ಆಚಾರ್ಯ ಇವರಿಗೆ ಅಂಬುರುಹ ಯಕ್ಷಸದನ ಪ್ರಶಸ್ತಿಯನ್ನು ನೀಡಿ ಗೌರವಿಸಿದ್ದು ಪ್ರಸಕ್ತ ವರ್ಷ ಕೆ.ಎಚ್.ದಾಸಪ್ಪ ರೈಯವರಿಗೆ ನೀಡಿ ಗೌರವಿಸಲಿದೆ. ಪ್ರಶಸ್ತಿ ಪ್ರದಾನ ಕಾರ್ಯಕ್ರಮದ ತರುವಾಯ ಅಂಬುರುಹದಲ್ಲಿ ಪ್ರತಿಷ್ಠಾನದ ಕಲಾವಿದರಿಂದ ತಿಂಗಳಕೂಟದ ನಿಮಿತ್ತ ಯಕ್ಷಗಾನ ತಾಳಮದ್ದಳೆ ಕಾರ್ಯಕ್ರಮ ನಡೆಯಲಿದೆ ಎಂದು ಪ್ರಕಟಣೆ ತಿಳಿಸಿದೆ.

Related Articles

Latest Articles