ಚಂದ್ರಯಾನ-3 ಯೋಜನೆಯ ರೋವರ್ ಮತ್ತು ಲ್ಯಾಂಡರ್ ಕಾರ್ಯಾಚರಣೆ ಬಹುತೇಕ ಸ್ಥಗಿತಗೊಂಡಿದೆ. ಲ್ಯಾಂಡರ್ “ವಿಕ್ರಮ್’ ಮತ್ತು ರೋವರ್ “ಪ್ರಜ್ಞಾನ್’ ಸಂಪೂರ್ಣವಾಗಿ ನಿದ್ರೆಗೆ ಜಾರಿವೆ. ಆದರೂ ಕೊನೆಯ ದಿನದವರೆಗೂ ಕಾದು ನೋಡಲು ಇಸ್ರೋ ಅಧ್ಯಕ್ಷ ಸೋಮನಾಥ್ ಹೇಳಿದ್ದಾರೆ.
ಒಂದು ಚಂದ್ರನ ದಿನ (14 ಭೂಮಿಯ ದಿನಗಳು) ದ ಕಾರ್ಯಾಚರಣೆಗಾಗಿ ವಿಕ್ರಮ್ ಮತ್ತು ಪ್ರಾಗ್ಯಾನ್ ಅನ್ನು ವಿನ್ಯಾಸಗೊಳಿಸಲಾಗಿತ್ತು. ಆದರೂ ಇವು ಎರಡನೇ ಇನ್ನಿಂಗ್ಸ್ ಆರಂಭಿಸಬಹುದು ಎಂಬ ವಿಶ್ವಾಸ ಅನೇಕರಲ್ಲಿತ್ತು. ಒಂದು ಚಂದ್ರನ ದಿನದ ನಂತರ ಚಂದ್ರನ ದಕ್ಷಿಣ ಧ್ರುವದಲ್ಲಿ ಸೂರ್ಯನ ಬೆಳೆಕು ಬೀಳದೆ ಸಂಪೂರ್ಣ ಕತ್ತಲು ಆವರಿಸುತ್ತದೆ. ಈ ವೇಳೆ ಯಾವುದೇ ಅಧ್ಯಯನ ಸಾಧ್ಯವಿಲ್ಲ. ಹಾಗಾಗಿ 14 ದಿನಗಳ ಅಧ್ಯಯನಕ್ಕೆ ಲ್ಯಾಂಡರ್ ಮತ್ತು ರೋವರ್ ಅನ್ನು ಇಸ್ರೋ ಅಭಿವೃದ್ಧಿಪಡಿಸಿತ್ತು.
ಆ.23ರಂದು ವಿಕ್ರಮ್ ಲ್ಯಾಂಡರ್ ಚಂದ್ರನ ಮೇಲೆ ಸಾಫ್ಟ್ ಲ್ಯಾಂಡಿಂಗ್ ಮಾಡಿತ್ತು. ಒಂದು ಚಂದ್ರನ ದಿನದ ನಂತರ ವಿಕ್ರಮ್ ಮತ್ತು ಪ್ರಗ್ಯಾನ್ ಕಾರ್ಯಾಚರಣೆ ಸ್ಥಗಿತಗೊಳಿಸಿತು. ಇದಾದ ನಂತರ, ಪುನಃ ಸೆ.20, 21 ಮತ್ತು 22ರಂದು ಅವುಗಳಿಗೆ ಚಾಲನೆ ನೀಡಲು ಇಸ್ರೋ ವಿಜ್ಞಾನಿಗಳು ಪ್ರಯತ್ನಿಸಿದ್ದಾರೆ. ಆದರೆ ಅದು ನಿದ್ರೆಯಿಂದ ಎದ್ದಿಲ್ಲ.
“ಈ ಚಂದ್ರನ ದಿನ ಅಂದರೆ ಮುಂದಿನ 14 ಭೂಮಿಯ ದಿನಗಳವರೆಗೆ ನಾವು ವಿಕ್ರಮ್ ಮತ್ತು ಪ್ರಗ್ಯಾನ್ ಅನ್ನು ಕಾರ್ಯಚಲಿಸುವಂತೆ ಮಾಡಲು ಯತ್ನಿಸುತ್ತೇವೆ. ಕೊನೆ ಕ್ಷಣದವರೆಗೂ ನಾವು ಈ ಪ್ರಯತ್ನವನ್ನು ಮುಂದುವರಿಸಲಿದ್ದು, ಹೆಚ್ಚುವರಿಯಾಗಿ ಚಂದ್ರನ ಅಧ್ಯಯನಕ್ಕೆ ಸಿಗುವ ಯಾವುದೇ ಅವಕಾಶವನ್ನು ನಾವು ತಪ್ಪಿಸಿಕೊಳ್ಳುವುದಿಲ್ಲ’ ಎಂದು ಇಸ್ರೋ ಅಧ್ಯಕ್ಷ ಎಸ್.ಸೋಮನಾಥ್ ತಿಳಿಸಿದ್ದಾರೆ.