ವಿಧಾನಸೌಧಲ್ಲಿಯೇ ಪಾಕಿಸ್ತಾನ್ ಜಿಂದಾಬಾದ್ ಎಂಬುದಾಗಿ ಘೋಷಣೆ ಕೂಗಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಸ್ಫೋಟಕ ಮಾಹಿತಿ ಲಭ್ಯವಾಗಿದೆ. “ವಿಧಾನಸೌಧದಲ್ಲಿ ಪಾಕಿಸ್ತಾನ್ ಜಿಂದಾಬಾದ್ ಘೋಷಣೆ ಕೂಗಿದ್ದು ನಿಜ” ಎಂಬುದಾಗಿ ವಿಧಿವಿಜ್ಞಾನ ಪ್ರಯೋಗಾಲಯದ ತಜ್ಞ (FSL) ಡಾ.ಬಿ.ಎನ್.ಫಣೀಂದ್ರ ಅವರು ಮಾಹಿತಿ ನೀಡಿದ್ದಾರೆ.
ಎಫ್‌ಎಸ್‌ಎಲ್ ವರದಿಯಲ್ಲೂ ಇದನ್ನೇ ಉಲ್ಲೇಖಿಸಿರುವುದಾಗಿ ಫಣೀಂದ್ರ ತಿಳಿಸಿದ್ದಾರೆ. ರಾಜ್ಯಸಭಾ ಚುನಾವಣೆಯ ಫಲಿತಾಂಶ ಪ್ರಕಟಗೊಂಡ ವೇಳೆ ಕಾಂಗ್ರೆಸ್‌ನ ಮೂವರು ಸದಸ್ಯರ ಪೈಕಿ ನಾಸೀರ್ ಹುಸೇನ್ ಬೆಂಬಲಿಗರು ಪಾಕಿಸ್ತಾನ ಪರ ಜೈಕಾರ ಕೂಗಿದ್ದಾರೆ ಎಂಬ ಪ್ರಕರಣದ ಕುರಿತು ವಿಧಿ ವಿಜ್ಞಾನ ಪ್ರಯೋಗಾಲಯ ವರದಿ ಸಿದ್ಧಗೊಂಡಿದೆ. ಘಟನೆ ನಡೆದ ಸಂದರ್ಭದಲ್ಲಿ ಸಿಎಂ ಸಿದ್ದರಾಮಯ್ಯ ಅವರು ಎರಡು ದಿನಗಳ ಒಳಗಾಗಿ ಎಫ್‌ಎಸ್‌ಎಲ್ ರಿಪೋರ್ಟ್ ಕೊಡುವಂತೆ ಸೂಚಿಸಿದ್ದರು. ಅಂತೆಯೇ ವರದಿ ಸಿದ್ದಗೊಂಡಿದ್ದು ಗೃಹ ಇಲಾಖೆಗೆ ವರದಿ ಸಲ್ಲಿಕೆಯಾಗಿದೆ. ಈಗ ವರದಿಯ ಸ್ಫೋಟಕ ಮಾಹಿತಿಯು ಲಭ್ಯವಾಗಿದೆ.
“ವಿಧಾನಸೌಧದಲ್ಲಿ ಸಂಭ್ರಮಾಚರಣೆ ವೇಳೆ ರೆಕಾರ್ಡ್ ಆದ ವಿಡಿಯೊ ಹಾಗೂ ಆಡಿಯೊಗಳನ್ನು ಎರಡು ಹಂತದಲ್ಲಿ ಪರಿಶೀಲನೆ ಮಾಡಲಾಗಿದೆ. ಘೋಷಣೆ ಕೂಗಿದವರ ಆಡಿಯೊ, ಬಾಯಿ, ತುಟಿಯ ಚಲನವಲನಗಳನ್ನು ಕೂಲಂಕಷವಾಗಿ ಗಮನಿಸಲಾಗಿದೆ. ಪರಿಶೀಲನೆ ಬಳಿಕ, ಒಬ್ಬನು ನಾಸೀರ್ ಸಾಬ್ ಜಿಂದಾಬಾದ್ ಎಂದೂ, ಮತ್ತೊಬ್ಬನು ಪಾಕಿಸ್ತಾನ್ ಜಿಂದಾಬಾದ್ ಎಂಬುದಾಗಿ ಘೋಷಣೆ ಕೂಗಿದ್ದು ನಿಜ. ಹಾಗೊಂದು ವೇಳೆ, ಘೋಷಣೆ ಕೂಗಿದ ಆರೋಪಿಗಳನ್ನು ಕರೆದುಕೊಂಡು ಬಂದರೆ, ಅವರ ಧ್ವನಿ ತಪಾಸಣೆ ಮೂಲಕ ಇವರೇ ಘೋಷಣೆ ಕೂಗಿದ್ದಾರೆ ಎಂಬುದನ್ನು ಪತ್ತೆಹಚ್ಚಬಹುದು” ಎಂದು ಫಣೀಂದ್ರ ಅವರು ಮಾಹಿತಿ ನೀಡಿದ್ದಾರೆ.
ಈ ಪ್ರಕರಣದ ಕುರಿತು ರಾಜ್ಯ ಸರ್ಕಾರದ ವಿರುದ್ಧ ಬಿಜೆಪಿ ನಾಯಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕೂಲಂಕಷ ತನಿಖೆಗೂ ಆದೇಶಿಸಿದ್ದಾರೆ. ಇನ್ನು ಈಗಾಗಲೇ ಪೊಲೀಸರು ಆರೋಪಿಯನ್ನು ವಶಕ್ಕೆ ಪಡೆದುಕೊಂಡಿದ್ದಾಗಿ ತಿಳಿದುಬಂದಿದೆ.