Saturday, June 22, 2024

ದಕ್ಷಿಣ ಕನ್ನಡ: ಹದಿನೇಳು ಜೋಡಿ ಅವಳಿ ಮಕ್ಕಳಿಗೆ ಏಕಕಾಲದಲ್ಲಿ ಅಂಚೆ ಖಾತೆ

ಮಂಗಳೂರು: ಹದಿನೇಳು ಜೋಡಿ ಅವಳಿ ಮಕ್ಕಳಿರುವ ಶಾಲೆಯಲ್ಲಿ ಮತ್ತೊಂದು ದಾಖಲೆ ನಿರ್ಮಾಣವಾಗಿದೆ. ಮಂಗಳೂರು ಅಂಚೆ ವಿಭಾಗದ ಕೈರಂಗಳ ಶಾಖೆಯ ವ್ಯಾಪ್ತಿಯ ಶಾರದಾ ಗಣಪತಿ ವಿದ್ಯಾಕೇಂದ್ರದಲ್ಲಿ ಏಕಕಾಲದಲ್ಲಿ ಈ ಮಕ್ಕಳ ಸುಕನ್ಯಾ ಸಮೃದ್ಧಿ, ಮಹಿಳಾ ಸಮ್ಮಾನ ಪ್ರಮಾಣ ಪತ್ರ ಮತ್ತು ಪಬ್ಲಿಕ್ ಪ್ರಾವಿಡೆಂಟ್ ಫಂಡ್ ಖಾತೆಗಳನ್ನು ತೆರೆಯುವ ಕಾರ್ಯ ನಡೆದಿದೆ.‌

ಶಾಲೆಯ ಸಭಾಭವನದಲ್ಲಿ ಶುಕ್ರವಾರ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಶಾಲಾ ಸಂಚಾಲಕ ಟಿ.ಜಿ. ರಾಜಾರಾಮ್ ಭಟ್, ’18 ವರ್ಷಗಳಿಂದ ಈ ಶಾಲೆಯು ಮಕ್ಕಳಿಗೆ ವಿದ್ಯಾದಾನ ಮಾಡುತ್ತಿದೆ. 913 ಮಕ್ಕಳು ಈ ಶಾಲೆಯಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ. ಗ್ರಾಮೀಣ ಮಕ್ಕಳಲ್ಲಿ ಉಳಿತಾಯ ಪ್ರಜ್ಞೆ ಮೂಡಿಸುವ ಭಾಗವಾಗಿ ಮಂಗಳೂರು ಅಂಚೆ ವಿಭಾಗದ ಸಹಕಾರದಲ್ಲಿ ಈ ಕಾರ್ಯಕ್ರಮ ನಡೆಸಲಾಗಿದೆ’ ಎಂದರು.

17 ಜೋಡಿ ಅವಳಿ ಮಕ್ಕಳಿಗೆ ಒಟ್ಟು 34 ಅಂಚೆ ಉಳಿತಾಯ ಖಾತೆಗಳನ್ನು ಏಕಕಾಲಕ್ಕೆ ತೆರೆಯುವ ಮೂಲಕ ಮಂಗಳೂರು ಅಂಚೆ ವಿಭಾಗ ದಾಖಲೆ ಬರೆದಿದೆ. ಈ ಹಿಂದೆ ಐದು ತಲೆಮಾರಿನ ಮಹಿಳೆಯರಿಗೆ ಏಕಕಾಲಕ್ಕೆ ಮಹಿಳಾ ಸಮ್ಮಾನ ಪ್ರಮಾಣ ಪತ್ರ ಖಾತೆ ತೆರೆಯಲಾಗಿತ್ತು ಎಂದು ಹಿರಿಯ ಅಂಚೆ ಅಧೀಕ್ಷಕ ಎಂ.ಸುಧಾಕರ ಮಲ್ಯ ಹೇಳಿದರು.

ಉಪ ಅಂಚೆ ಅಧೀಕ್ಷಕ ಪಿ.ದಿನೇಶ್, ಅಂಚೆ ನಿರೀಕ್ಷಕ ಸುರೇಶ್, ತಾಲ್ಲೂಕು ಪಂಚಾಯಿತಿ ಸದಸ್ಯ ನವೀನ್, ಸಹಕಾರಿ ಬ್ಯಾಂಕ್ ನಿರ್ದೇಶಕ ಜಯರಾಂ ಶೆಟ್ಟಿ, ಪ್ರಾಂಶುಪಾಲ ಶ್ರೀಹರಿ, ಅಂಚೆ ಇಲಾಖೆಯ ಸುಭಾಷ್ ಸಾಲಿಯಾನ್, ರೋಹನ್ ಲೂಯಿಸ್ ಇದ್ದರು. ಅಂಚೆ ಇಲಾಖೆಯ ದಯಾನಂದ ಕತ್ತಲ್ ಸಾರ್ ಕಾರ್ಯಕ್ರಮ ನಿರೂಪಿಸಿದರು. ಸೇರಾಜೆ ಶ್ರೀನಿವಾಸ್ ಭಟ್ ಸ್ವಾಗತಿಸಿದರು. ಚಂದ್ರಕುಮಾರ್ ವಂದಿಸಿದರು.

Related Articles

Latest Articles