ರಾಜ್ಯಾದ್ಯಂತ ಮಳೆ ಸುರಿಯುತ್ತಿದ್ದು ಅಲ್ಲಲ್ಲಿ ಅವಘಡಗಳು ಸಂಭವಿಸುತ್ತಿದೆ. ಮಾರ್ಗ ಮಧ್ಯೆ ಬೈಕ್‌ನಲ್ಲಿ ಸಂಚರಿಸುತ್ತಿದ್ದಾಗ ಮರ ಕುಸಿದು ಮೈಮೇಲೆ ಬಿದ್ದು ಯುವಕ ಮೃತಪಟ್ಟ ಘಟನೆ ನಡೆದಿದೆ. ಬೆಳಗಾವಿ ತಾಲೂಕಿನ ಬೆಳಗುಂದಿ ಗ್ರಾಮದ ಬಳಿ ನಡೆದಿದೆ. ಕರ್ಲೆ ಗ್ರಾಮದ ಸೋಮನಾಥ್ ಮುಚ್ಚಂಡಿಕರ್ (21) ಮೃತ ದುರ್ದೈವಿ.
ಒಂದೇ ಬೈಕ್ ಮೇಲೆ ಮೂವರು ಬೆಳಗಾವಿಗೆ ಹೋಗುತ್ತಿದ್ದರು. ಇದೇ ವೇಳೆ ಧಾರಾಕಾರ ಮಳೆಗೆ ಏಕಾಏಕಿ ಬೃಹತ್ ಮರವೊಂದು ಧರೆಗುರುಳಿದೆ. ಪರಿಣಾಮ ಮೂವರಲ್ಲಿ ಓರ್ವ ಯುವಕ ಸ್ಥಳದಲ್ಲೇ ಮೃತಪಟ್ಟಿದ್ದು, ಮತ್ತಿಬ್ಬರ ಸ್ಥಿತಿ ಚಿಂತಾಜನಕವಾಗಿದೆ.
ಕೂಡಲೇ ವಿಠ್ಠಲ್ ತಳವಾರ್, ಸ್ವಪ್ನಿಲ್ ದೇಸಾಯಿ ಇಬ್ಬರನ್ನು ಸ್ಥಳೀಯರು ಖಾಸಗಿ ಆಸ್ಪತ್ರೆಯಲ್ಲಿ ದಾಖಲಿಸಿದ್ದಾರೆ. ಈ ವಿಷಯ ತಿಳಿದ ಕೂಡಲೇ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ರಸ್ತೆಯಲ್ಲಿದ್ದ ಮರವನ್ನು ತೆರವು ಮಾಡಿದ್ದಾರೆ. ಈ ಘಟನೆ ಸಂಬಂಧ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಾಗಿದೆ.