Wednesday, February 19, 2025

ಅಣ್ಣಾಮಲೈಗೆ ಕೇಂದ್ರ ಸಚಿವ ಸ್ಥಾನ.? ಈ ಎಲ್ಲಾ ಅಂಶಗಳು ಗಣನೀಯವಾಗಿ ಪರಿಗಣಿಸಲಾಗುತ್ತದೆ‌.!

ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ತಮಿಳುನಾಡಿನಲ್ಲಿ ಬಿಜೆಪಿ ಹಿಂದೆಂದಿಗಿಂತಲೂ ಮತಗಳನ್ನು ಪಡೆದಿದೆ. ಇದರ ಹಿಂದಿನ ಶಕ್ತಿ ಪಕ್ಷದ ರಾಜ್ಯಾಧ್ಯಕ್ಷ ಅಣ್ಣಾಮಲೈ. ಅಣ್ಣಾಮಲೈ ಚುನಾವಣೆಯಲ್ಲಿ ಸೋತಿದ್ದರೂ, ತಮಿಳುನಾಡಲ್ಲಿ ಪಕ್ಷದ ವರ್ಚಸ್ಸು ಹೆಚ್ಚಿಸಲು ಅವರೇ ಕಾರಣ ಎಂಬುದು ಕೇಂದ್ರ ನಾಯಕತ್ವಕ್ಕೂ ಮನವರಿಕೆಯಾಗಿದೆ. ಕೇರಳದಲ್ಲೂ ಕಮಲ ಅರಳಿದ್ದು ಇತಿಹಾಸ. ಅಣ್ಣಾಮಲೈ ಮೋದಿ ಸಂಪುಟ ಸೇರುವ ಸಾಧ್ಯತೆ ಇದೆ ಎನ್ನುವ ಮಾತುಗಳು ದಟ್ಟವಾಗಿ ಕೇಳಿ ಬರುತ್ತಿದೆ.

ಇನ್ನು ಅಣ್ಣಾಮಲೈ ಈ ಕುರಿತು ಈಗಾಗಲೇ ಬಿಜೆಪಿ ರಾಷ್ಟ್ರೀಯ ನಾಯಕರ ಜೊತೆ ಚರ್ಚೆ ನಡೆಸಿದ್ದಾರೆ. ಈ ಹಿಂದೆ ಪಕ್ಷದ ರಾಜ್ಯಾಧ್ಯಕ್ಷರಾಗಿ ಸೇವೆ ಸಲ್ಲಿಸಿದವರಿಗೆ ಸಚಿವ ಸ್ಥಾನ, ರಾಜ್ಯಪಾಲರ ಸ್ಥಾನ ನೀಡಿದಂತೆಯೇ ಈ ಬಾರಿಯೂ ಪಕ್ಷದ ನಾಯಕತ್ವ ಖಂಡಿತಾ ಸಚಿವ ಸ್ಥಾನ ನೀಡಲಿದೆ ಎಂಬ ನಿರೀಕ್ಷೆಯಿದೆ ಎನ್ನಲಾಗುತ್ತಿದೆ.

ಈ ಹಿಂದೆ ಪಕ್ಷದ ರಾಜ್ಯಾಧ್ಯಕ್ಷರಾಗಿದ್ದ ಇಳಾ ಗಣೇಶನ್, ಸಿ.ಪಿ.ರಾಧಾಕೃಷ್ಣನ್ ಮತ್ತು ತಮಿಳಿಸೈ ಅವರನ್ನು ರಾಜ್ಯಪಾಲರನ್ನಾಗಿ ನೇಮಕ ಮಾಡಲಾಗಿದ್ದು, ತನಗಿಂತ ಮೊದಲು ಪಕ್ಷದ ರಾಜ್ಯಾಧ್ಯಕ್ಷರಾಗಿದ್ದ ಎಲ್.ಮುರುಗನ್ ಅವರಿಗೆ ಕೇಂದ್ರ ಸಚಿವ ಸ್ಥಾನ ನೀಡಲಾಗಿತ್ತು. ಹೀಗಾಗಿ ಅವರಿಗೆ ಕೇಂದ್ರ ಸಚಿವ ಸ್ಥಾನ ಸಿಗುವುದು ಖಚಿತ ಎಂದು ಪಕ್ಷದ ಉನ್ನತ ಮೂಲಗಳು ಹೇಳುತ್ತಿವೆ.

ಅಣ್ಣಾಮಲೈ ಬಿಜೆಪಿಯ ರಾಜ್ಯಾಧ್ಯಕ್ಷರಾಗಿ ಸಾರಥ್ಯವನ್ನು ವಹಿಸಿಕೊಂಡಾಗಿನಿಂದ ಪಕ್ಷದ ವರ್ಚಸ್ಸು ನಿರಂತರವಾಗಿ ಹೆಚ್ಚುತ್ತಿದೆ ಮತ್ತು ಲೋಕಸಭೆ ಚುನಾವಣೆಯಲ್ಲಿ ಪಕ್ಷದ ಮತಬ್ಯಾಂಕ್ ಶೇಕಡಾ 11.5 ಕ್ಕೆ ಏರಿದೆ ಎಂದು ಅವರು ಹೇಳುತ್ತಾರೆ.

ದೇಶಾದ್ಯಂತ ಬಿಜೆಪಿಯಿಂದ ಸ್ಪರ್ಧಿಸಿರುವ ಅಭ್ಯರ್ಥಿಗಳ ಎಲ್ಲ ವಿವರಗಳು ಮೋದಿ ಅವರ ಬಳಿ ಇದ್ದು, ಅವುಗಳನ್ನು ಪರಿಶೀಲಿಸಿದ ನಂತರ ಯಾರಿಗೆ ಯಾವ ಸಚಿವ ಸ್ಥಾನ ನೀಡಬೇಕೆಂಬುದರ ಕುರಿತು ನಿರ್ಧಾರ ಕೈಗೊಳ್ಳುತ್ತಾರೆ ಎಂದು ಸ್ಥಳೀಯ ಮುಖಂಡರು ಹೇಳುತ್ತಾರೆ.

ಅದೇನೇ ಇರಲಿ, ತಮಿಳುನಾಡಿನಲ್ಲಿ ಪಕ್ಷ ಇನ್ನಷ್ಟು ಎತ್ತರಕ್ಕೆ ಬೆಳೆಯಬೇಕಾದರೆ ಅಣ್ಣಾಮಲೈ ಸಚಿವ ಸಂಪುಟಕ್ಕೆ ಸೇರ್ಪಡೆಯಾಗಬೇಕು ಎಂಬುದು ಕಾರ್ಯಕರ್ತರ ಒತ್ತಾಸೆಯಾಗಿದೆ. ಇದಕ್ಕೆ ಒಂದೆರೆಡು ದಿನಗಳ ನಂತರವಷ್ಟೇ ಉತ್ತರ ತಿಳಿಯಲಿದೆ.

Related Articles

Latest Articles