ಕೊಡಗು: ಹೆಂಡತಿಗೆ ಚಾಕುವಿನಿಂದ ಇರಿದು ಗಂಡ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಜಿಲ್ಲೆಯ ಪಿರಿಯಾಪಟ್ಟಣ ತಾಲೂಕಿನ ಮುತ್ತಿನ ಮುಳ್ಳುಸೋಗೆ ಗ್ರಾಮದಲ್ಲಿ ನಡೆದಿದೆ. ಸದ್ಯ ಹೆಂಡತಿಯ ಸ್ಥಿತಿ ಚಿಂತಾಜನಕವಾಗಿದ್ದು ಜೀವನ್ಮರಣ ಹೋರಾಟ ನಡೆಸುತ್ತಿದ್ದಾರೆ.
ಪ್ರಸನ್ನ ಆತ್ಮಹತ್ಯೆ ಮಾಡಿಕೊಂಡ ದುರ್ದೈವಿ. ಈತನು ಆತ್ಮಹತ್ಯೆ ಮಾಡಿಕೊಳ್ಳುವುದರ ಮೊದಲು ಪತ್ನಿಗೆ ಚಾಕುವಿನಿಂದ 5 ಬಾರಿ ಇರಿದಿದ್ದಾನೆ. ರಕ್ತದ ಮಡುವಿನಲ್ಲಿ ಪತ್ನಿಯು ನೆಲಕ್ಕೆ ಬೀಳುತ್ತಿದ್ದಂತೆ ಕೋಣೆಗೆ ಹೋಗಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಹೆಂಡತಿ ಗಾಯಗೊಂಡು ರಕ್ತದ ಮಡುವಿನಲ್ಲಿ ಬಿದ್ದಿದ್ದನ್ನು ಕಂಡು ಕುಟುಂಬಸ್ಥರು, ಸ್ಥಳೀಯರು ಆಕೆಯನ್ನು ಮಡಿಕೇರಿಯ ಜಿಲ್ಲಾಸ್ಪತ್ರೆಗೆ ದಾಖಲು ಮಾಡಿದ್ದಾರೆ. ಸದ್ಯ ಆಸ್ಪತ್ರೆಯಲ್ಲಿ ಶ್ವೇತಾ ಅವರ ಸ್ಥಿತಿ ಚಿಂತಾಜನಕವಾಗಿದ್ದು ಜೀವನ್ಮರಣ ಹೋರಾಟ ನಡೆಸುತ್ತಿದ್ದಾರೆ. ಪತ್ನಿಯ ಮೇಲೆ ಪತಿ ವಿಪರೀತ ಸಂಶಯ ಪಡುತ್ತಿದ್ದನು. ಹೀಗಾಗಿ ಒಂದು ತಿಂಗಳ ಹಿಂದೆ ಗಂಡನ ಮನೆಯನ್ನು ತೊರೆದು ತವರು ಮನೆಗೆ ಬಂದು ಪತ್ನಿ ನೆಲೆಸಿದ್ದಳು.