ಕುವೈತ್‌ನಲ್ಲಿ ಸಂಭವಿಸಿದ ಭೀಕರ ಅಗ್ನಿ ದುರಂತದಲ್ಲಿ 23 ಮಲಯಾಳಿಗಳು ಸೇರಿದಂತೆ 50 ಜನರು ಸಾವನ್ನಪ್ಪಿದ್ದಾರೆ. ಈ ಮನಕಲುಕುವ ಘಟನೆ ನಡೆವೆ, ಸಾಹಸಗಾಥೆಯೂ ಸುದ್ದಿಯಲ್ಲಿದೆ. ವ್ಯಕ್ತಿಯೊಬ್ಬರು ತನ್ನ ಜೀವದ ಜೊತೆ ಇತರ ನಾಲ್ವರ ಜೀವ ಉಳಿಸಿ ಮಾನವೀಯತೆ ಮೆರೆದಿದ್ದಾರೆ.
ಬೆಂಕಿಯಲ್ಲಿ ಸುಟ್ಟು ಭಸ್ಮವಾಗುವುದನ್ನು ತಪ್ಪಿಸಲು ಕಟ್ಟಡದಿಂದ ಜಿಗಿದು ಕಾಲಿಗೆ ಏಟು ಮಾಡಿಕೊಂಡಿದ್ದ ಕೇರಳ ಮೂಲದ ವ್ಯಕ್ತಿಯೊಬ್ಬರು ಘಟನೆ ಬಗ್ಗೆ ಮಾಧ್ಯಮಕ್ಕೆ ತಿಳಿಸಿದ್ದಾರೆ. ನನ್ನ ಜೊತೆಗೆ ಇತರ ನಾಲ್ವರನ್ನು ರಕ್ಷಿಸಿದ್ದಾಗಿ ತಿರುವಲ್ಲಾ ಮೂಲದ ಅನಿಲ್ ಕುಮಾರ್ ಹೇಳಿದ್ದಾರೆ. ಪ್ರಸ್ತುತ ಅನಿಲ್ ಕುಮಾರ್ ಕುವೈತ್ ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಎರಡನೇ ಮಹಡಿಯಿಂದ ಜಿಗಿದು ಕಾಲಿಗೆ ಗಾಯ ಮಾಡಿಕೊಂಡಿರುವ ಅನಿಲ್ ಕುಮಾರ್ ಮಾತನಾಡಿದ್ದು, ‘‘ನನಗೆ ಬೇಗ ಎದ್ದು ಕೆಲಸಕ್ಕೆ ಹೋಗುವ ಅಭ್ಯಾಸವಿದೆ. ಪೂರ್ವಭಾವಿ ಕೆಲಸ ಮಾಡುವಾಗ ಭಾರೀ ಶಾಖ ಮತ್ತು ಹೊಗೆಯ ಅನುಭವವಾಯಿತು. ದಟ್ಟವಾದ ಹೊಗೆ ಕೋಣೆಯಲ್ಲಿ ತುಂಬಿತ್ತು. ನನಗೆ ಉಸಿರುಗಟ್ಟಿದ ಅನುಭವವಾಯಿತು. ಜನರನ್ನು ಎಬ್ಬಿಸಲು ಪ್ರಯತ್ನಿಸಿದೆ. ಮುಂಜಾನೆ ಅನೇಕರು ಮಲಗಿದ್ದರು. ಇತರ ಕೋಣೆಗಳ ಬಾಗಿಲುಗಳನ್ನು ಬಡಿದು ಎಲ್ಲರನ್ನು ಎಬ್ಬಿಸಿ ಪಾರಾಗಲು ಯತ್ನ ನಡೆಸಿದೆ. ನಾಲ್ವರು ಸ್ನೇಹಿತರು ಮೆಟ್ಟಿಲುಗಳ ಕೆಳಗೆ ಇಳಿದು ತಪ್ಪಿಸಿಕೊಳ್ಳಲು ಪ್ರಯತ್ನಿಸಿದಾಗ, ಅದು ಸಾಧ್ಯವಾಗಿಲ್ಲ. ಆಗ ಎರಡನೇ ಮಹಡಿಯಿಂದ ಜಿಗಿಯುವುದೊಂದೇ ದಾರಿಯಾಗಿತ್ತು. ನಾವು ಹೊರಗೆ ಹಾರಿದೆವು. ಆಮೂಲಕ ಜೀವ ಉಳಿಯಿತು” ಎಂದು ಅನಿಲ್‌ಕುಮಾರ್ ತಿಳಿಸಿದ್ದಾರೆ.
ಬಿದ್ದ ರಭಸಕ್ಕೆ ಅನಿಲ್ ಕುಮಾರ್ ಅವರ ಕಾಲಿಗೆ ಪೆಟ್ಟಾಗಿದೆ. ಹಿಮ್ಮಡಿ ಮತ್ತು ಪಾದಕ್ಕೆ ಗಂಭೀರ ಗಾಯವಾಗಿರುವ ಕಾರಣ ವೈದ್ಯರು ಶಸ್ತ್ರಚಿಕಿತ್ಸೆಗೆ ಶಿಫಾರಸು ಮಾಡಿದ್ದಾರೆ. ಸದ್ಯ ಅನಿಲ್ ಕುಮಾರ್ ಅವರ ಈ ಕಾರ್ಯಕ್ಕೆ ಭಾರೀ ಮೆಚ್ಚುಗೆ ವ್ಯಕ್ತವಾಗುತ್ತಿದೆ.