ಕಲಬುರಗಿ: ಚಿಂಚೋಳಿ ತಾಲ್ಲೂಕಿನ ಕನಕಪುರ ಗ್ರಾಮದಲ್ಲಿ ಸಾಲಬಾಧೆಯಿಂದ ರೈತ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಅತಿವೃಷ್ಟಿ ಮತ್ತು ಅನಾವೃಷ್ಟಿಯಿಂದ ಮುಂಗಾರು ಮಳೆ ಏರುಪೇರಾಗಿ ಬೆಳೆ ಕೈಕೊಟ್ಟಿದ್ದರಿಂದ ಕನಕಪುರ ಗ್ರಾಮದ ಮಲ್ಲೇಶಪ್ಪ ಕಲ್ಲಪ್ಪ (65) ವಿಷ ಕುಡಿದಿದ್ದಾರೆ.
ತಕ್ಷಣವೇ ಅವರನ್ನು ಕಲಬುರಗಿಯ ಜಿಮ್ಸ್‌ಗೆ ದಾಖಲಿಸಲಾಗಿತ್ತು. ಚಿಕಿತ್ಸೆಗೆ ಸ್ಪಂದಿಸದೆ ಸೆ.10ರ ನಸುಕಿನ ಜಾವ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ ಎಂದು ಗ್ರಾಮದ ಮುಖಂಡ ಹಣಮಂತರಾವ್ ದೇಶಪಾಂಡೆ ತಿಳಿಸಿದ್ದಾರೆ.
ಪೊಲೀಸರಿಗೆ ಮಾಹಿತಿ ನೀಡಲಾಗಿದ್ದು ಚಿಂಚೋಳಿ ಠಾಣೆಯ ಪೊಲೀಸರು ಆಸ್ಪತ್ರೆಗೆ ಧಾವಿಸಿದ್ದಾರೆ. ಮೃತರಿಗೆ ಪತ್ನಿ, ಇಬ್ಬರು ಪುತ್ರರು, ಮೂವರು ಪುತ್ರಿಯರು ಇದ್ದಾರೆ. ಕೆಜಿಬಿ ಹಾಗೂ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ಸೇರಿದಂತೆ ವಿವಿಧೆಡೆ ₹ 8 ಲಕ್ಷ ಸಾಲವಿದೆ ಎಂದು ಹೇಳಿದ್ದಾರೆ.