ಪ್ರಪಂಚದಲ್ಲಿರುವ ಜೀವ ವೈವಿಧ್ಯವೇ ಸುಂದರ. ಅದರಲ್ಲೂ ಭಾರತದಲ್ಲಿ ವಿವಿಧ ಬಗೆಯ ವನ್ಯ ಜೀವಿಗಳು ಸುಂದರ ಸೋಜಿಗ.
ನೂರಾರು ಬಗೆಯ ಹಾವುಗಳು ಕರ್ನಾಟಕದಲ್ಲಿ ಕಾಣಸಿಗುತ್ತವೆ. ಪಶ್ವಿಮ ಘಟದಲ್ಲೂ ನೂರಾರು ಜಾತಿಯ ಹಾವಿನ ಸಂತತಿಗಳು ಇವೆ. ಆದರೆ ಮನುಷ್ಯನ ಅಟ್ಟಹಾಸದಿಂದ ಇಂದು ಜೀವಸಂಕುಲ ಅಳಿಯುತ್ತಿದೆ.
ಅತ್ಯಾಪರೂಪದ ಬಿಳಿ ಹೆಬ್ಬಾವು ಆಗಸ್ಟ್ ತಿಂಗಳ ಅಂತ್ಯದಲ್ಲಿ ಕುಮಟಾದಲ್ಲಿ ಕಾಣಸಿಕ್ಕಿದೆ. ಕುಮಟಾ ತಾಲ್ಲೂಕಿನ ಹೆಗಡೆ ಗ್ರಾಮದ ಗಾಂಧಿನಗರದ ದೇವಿ ಮುಕ್ರಿ ಎಂಬುವರ ಮನೆಯಲ್ಲಿ ಆ. 28ರ ರಾತ್ರಿ ಉರಗ ರಕ್ಷಕ ಪವನ ನಾಯ್ಕ ಅವರು 9.6 ಅಡಿ ಉದ್ದದ ಬಿಳಿ ಹೆಬ್ಬಾವನ್ನು ರಕ್ಷಣೆ ಮಾಡಿದ್ದಾರೆ.
‘ಕಳೆದ ವರ್ಷ ತಾಲ್ಲೂಕಿನ ಮಿರ್ಜಾನಿನಲ್ಲಿ ಸಿಕ್ಕ ಸಣ್ಣ ಬಿಳಿ ಹೆಬ್ಬಾವು ರಕ್ಷಿಸಿ ಕಾಡಿಗೆ ಬಿಡಲಾಗಿತ್ತು. ರಾಜ್ಯದಲ್ಲಿ ಕಂಡ ಮೂರು ಬಿಳಿ ಹೆಬ್ಬಾವುಗಳ ಪೈಕಿ ಎರಡು ಕುಮಟಾದಲ್ಲಿ ಸಿಕ್ಕಿದ್ದು ವಿಶೇಷ’ ಎಂದು ಪವನ ನಾಯ್ಕ ಮಾಧ್ಯಮಕ್ಕೆ ತಿಳಿಸಿದ್ದಾರೆ.
ಮೆಲಿನಿನ್ ಕೊರತೆಯಿಂದ ಬಿಳಿ ಬಣ್ಣ ಪಡೆಯುವ ಹೆಬ್ಬಾವು..!
‘ಸಾಮಾನ್ಯ ಹೆಬ್ಬಾವಿಗೆ ಹಾಗೂ ಬಿಳಿ ಹೆಬ್ಬಾವಿಗೆ ವ್ಯತ್ಯಾಸ ಇರುವುದಿಲ್ಲ. ಆದರೆ, ದೇಹದಲ್ಲಿ ಮೆಲಿನಿನ್ ಕೊರತೆಯಿಂದ ಹೆಬ್ಬಾವು ಜೈವಿಕವಾಗಿ ಬಿಳಿ ಬಣ್ಣ ಪಡೆಯುತ್ತದೆ. ಇದು ದೇಶದಲ್ಲೇ ಅತಿ ದೊಡ್ಡ ಬಿಳಿ ಹೆಬ್ಬಾವು ಆಗಿರುವ ಸಾಧ್ಯತೆ ಇದೆ. ಹೆಬ್ಬಾವಿನ ಮೇಲೆ ಸಣ್ಣಪುಟ್ಟ ಗಾಯಗಳಾಗಿದ್ದು, ಚಿಕಿತ್ಸೆ ಕೊಡಿಸಿ ಮೈಸೂರು ಪ್ರಾಣಿ ಸಂಗ್ರಹಾಲಯಕ್ಕೆ ಕಳುಹಿಸಲಾಗುವುದು’ ಎಂದು ಉಪ ಅರಣ್ಯ ಸಂರಕ್ಷಣಾಧಿಕಾರಿ ಸಿ.ರವಿಶಂಕರ ತಿಳಿಸಿದ್ದಾರೆ.
ಇನ್ನು ಕಳೆದ ವರ್ಷ ಆಗಸ್ಟ್ ತಿಂಗಳಲ್ಲೇ ಕುಮಟಾದ ಮಿರ್ಜಾನ್ನ ರಾಮನಗರ ನಿವಾಸಿ ಸುಬ್ರಹ್ಮಣ್ಯ ನಾಯ್ಕ ಎಂಬುವವರ ಮನೆಯಲ್ಲಿ ಅಪರೂಪದ ಬಿಳಿ ಹೆಬ್ಬಾವು ಗೋಚರಿಸಿತ್ತು.