ನವದೆಹಲಿ: ಮುಂದಿನ ವರ್ಷ ನಡೆಯಲಿರುವ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಟಿ20 ಕ್ರಿಕೆಟ್ ಟೂರ್ನಿಗೆ ಆಟಗಾರರ ಹರಾಜು ಪ್ರಕ್ರಿಯೆ ಡಿ.19 ರಂದು ದುಬೈನಲ್ಲಿ ನಡೆಯಲಿದೆ.
ಅದೇ ರೀತಿ ಮುಂದಿನ ಆವೃತ್ತಿಯ ಟೂರ್ನಿಗೆ ಆಟಗಾರರನ್ನು ತಂಡದಲ್ಲಿ ಉಳಿಸಿಕೊಳ್ಳುವ ಮತ್ತು ಬಿಟ್ಟುಕೊಡುವುದಕ್ಕೆ ಫ್ರಾಂಚೈಸಿಗಳಿಗೆ ನೀಡಿರುವ ಗಡುವನ್ನು ನ.26ರ ವರೆಗೆ ವಿಸ್ತರಿಸಲಾಗಿದೆ.
ಐಪಿಎಲ್ ಹರಾಜು ವಿದೇಶದಲ್ಲಿ ನಡೆಯಲಿರುವುದು ಇದೇ ಮೊದಲು. ‘ಮದುವೆ ಸೀಸನ್ ಆಗಿರುವುದರಿಂದ ಹರಾಜು ಪ್ರಕ್ರಿಯೆ ನಡೆಸಲು ಹೋಟೆಲ್‌ನ ಲಭ್ಯತೆ ಸಮಸ್ಯೆಯಾಗುವ ಸಾಧ್ಯತೆಯಿದೆ. ಆದ್ದರಿಂದ ದುಬೈನಲ್ಲಿ ನಡೆಸಲು ನಿರ್ಧರಿಸಲಾಯಿತು’ ಎಂದು ಐಪಿಎಲ್‌ನ ಅಧಿಕಾರಿಯೊಬ್ಬರು ತಿಳಿಸಿದರು.
ಈ ಬಾರಿಯ ಹರಾಜು ಪ್ರಕ್ರಿಯೆಗೆ ಪ್ರತಿ ತಂಡದ ಪರ್ಸ್ ಮೊತ್ತವನ್ನು 100 ಕೋಟಿಗೆ ಹೆಚ್ಚಿಸಲಾಗಿದೆ. ಕಳೆದ ವರ್ಷ ಈ ಮೊತ್ತ 95 ಕೋಟಿ ಆಗಿತ್ತು.