Thursday, July 18, 2024

ಸೂರಜ್​ ರೇವಣ್ಣರಿಂದ ಜೆಡಿಎಸ್ ಕಾರ್ಯಕರ್ತನ ಮೇಲೆ ಅಸಹಜ ಲೈಂಗಿಕ ದೌರ್ಜನ್ಯ ಆರೋಪ; ಐದು ಕೋಟಿಗಾಗಿ ಡಿಮ್ಯಾಂಡ್ ಮಾಡಿದ್ನಾ ಯುವಕ? ಆರೋಪ – ಪ್ರತ್ಯಾರೋಪಗಳೇನು?

ರಾಜ್ಯ ರಾಜಕೀಯದಲ್ಲಿ ಭಾರೀ ಸಂಚಲನ ಸೃಷ್ಟಿಸಿದ್ದ ಪ್ರಜ್ವಲ್ ರೇವಣ್ಣ ಮೇಲಿನ ಗಂಭೀರ ಆರೋಪ ತಕ್ಕ ಮಟ್ಟಿಗೆ ತಣ್ಣಗಾಗುತ್ತಿದ್ದಂತೆ ಹೆಚ್‌ಡಿ ರೇವಣ್ಣ ಕುಟುಂಬದ ಮೇಲೆ ಮತ್ತೊಂದು ಗಂಭೀರ ಆರೋಪ ಕೇಳಿಬಂದಿದೆ. ಪ್ರಜ್ವಲ್ ರೇವಣ್ಣ ವಿರುದ್ಧ ಅತ್ಯಾಚಾರ ಆರೋಪ ಪ್ರಕರಣ ಬಳಿಕ ರೇವಣ್ಣ ಕುಟುಂಬಕ್ಕೆ ಮತ್ತೊಂದು ಶಾಕ್ ಎದುರಾಗಿದೆ.

ಎಚ್​ಡಿ ರೇವಣ್ಣ ಅವರ ಪುತ್ರ ವಿಧಾನಪರಿಷತ್ ಸದಸ್ಯ ಡಾ. ಸೂರಜ್ ರೇವಣ್ಣ ಅವರ ವಿರುದ್ಧ ಸಲಿಂಗಕಾಮ, ಅಸಹಜ ಲೈಂಗಿಕ ದೌರ್ಜನ್ಯದ ಆರೋಪ ಕೇಳಿಬಂದಿದೆ. ಅಷ್ಟು ಮಾತ್ರವಲ್ಲದೆ ಸೂರಜ್ ಅವರನ್ನು ಹಣಕ್ಕಾಗಿ ಯುವಕ ಬ್ಲ್ಯಾಕ್‌ ಮೇಲ್ ಮಾಡಿದ್ದಾನೆ ಎಂದು ಸೂರಜ್ ಪರ ಅವರ ಆಪ್ತ ಪೊಲೀಸರಿಗೆ ದೂರು ನೀಡಿದ್ದಾರೆ.

ಜೆಡಿಎಸ್‌ ಕಾರ್ಯಕರ್ತನಿಗೆ ಅಸಹಜ ಲೈಂಗಿಕ ದೌರ್ಜನ್ಯ ಆರೋಪ
ಸೂರಜ್ ರೇವಣ್ಣ ಅವರು ತನ್ನನ್ನು ಅಸಹಜ ಲೈಂಗಿಕ ಕ್ರಿಯೆಗೆ ಒತ್ತಾಯಿಸಿ, ದೌರ್ಜನ್ಯ ಎಸಗಿದ್ದಾರೆ. ಈಗ ನನ್ನ ಹತ್ಯೆಗೆ ಸಂಚು ರೂಪಿಸಿದ್ದಾರೆ” ಎಂದು ಅರಕಲಗೂಡಿನ ಜೆಡಿಎಸ್‌ ಕಾರ್ಯಕರ್ತನೋರ್ವ ಹಾಸನದ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ, ಮುಖ್ಯಮಂತ್ರಿ ಹಾಗೂ ಗೃಹ ಮಂತ್ರಿಗಳಿಗೆ ದೂರು ಸಲ್ಲಿಸಿರುವುದಾಗಿ ವರದಿಯಾಗಿದೆ.

ಕಳೆದ ಜೂನ್ 16ರ ಭಾನುವಾರದಂದು ತನಗೆ ವಾಟ್ಸಪ್ ಮೂಲಕ ತನಗೆ ಉದ್ಯೋಗದ ನೆರವು ನೀಡುವುದಾಗಿ ಭರವಸೆಯ ಸಂದೇಶ ಕಳಿಸಿ ಗನ್ನಿಕಡದ ತೋಟದ ಮನೆಗೆ ಕರೆಸಿಕೊಂಡಿದ್ದರು. ಅವರ ಸಂದೇಶ ನಂಬಿಕೊಂಡು ಅಲ್ಲಿಗೆ ಹೋಗಿದ್ದೆ. ಅಲ್ಲಿನ ಕೊಠಡಿಯೊಂದಕ್ಕೆ ಕರೆದುಕೊಂಡು, ಸಲಿಂಗಕಾಮಕ್ಕೆ ಒತ್ತಾಯಿಸಿ, ಅವರು ತನ್ನ ಮೇಲೆ ಅಸಹಜ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ. ಅಲ್ಲದೇ, ನನ್ನ ದೇಹದ ಮೇಲೆಲ್ಲ ಗಾಯ ಮಾಡಿದ್ದಾರೆ.

ಇದನ್ನು ಎಲ್ಲಾದರೂ ಬಾಯಿಬಿಟ್ಟರೆ ಕೊಲ್ಲುವ ಬೆದರಿಕೆ ಕೂಡ ಹಾಕಿದ್ದಾರೆ. ಈ ಘಟನೆಯಿಂದ ನಾನು ಮಾನಸಿಕವಾಗಿ ಕುಗ್ಗಿದ್ದೇನೆ” ಎಂದು ಸುದೀರ್ಘ ದೂರಿನ ಪ್ರತಿಯಲ್ಲಿ ಜೆಡಿಎಸ್‌ ಕಾರ್ಯಕರ್ತ ಗಂಭೀರ ಆರೋಪ ಮಾಡಿರುವುದಾಗಿ ವರದಿಯಾಗಿದೆ. ಆದರೆ ಕಂಪ್ಲೈಟ್‌ ಎಫ್‌ಐಆರ್‍ ಆಗಿಲ್ಲ ಎಂಬುವುದು ಸದ್ಯದ ಬೆಳವಣಿಗೆ.

ಸೂರಜ್‌ ಆಪ್ತನಿಂದ ದೂರು ದಾಖಲು
ಇನ್ನು ಯುವಕನಿಂದ ಗಂಭೀರ ಆರೋಪ ಮಾಡುತ್ತಿದ್ದಂತೆ ಸೂರಜ್ ಆಪ್ತ, ಪೊಲೀಸರಿಗೆ ಯುವಕನ ವಿರುದ್ಧ ದೂರು ನೀಡಿದ್ದಾರೆ. ಶಿವಕುಮಾರ್ ಅವರು ಸೂರಜ್ ಪರ ಹೊಳೆನರಸೀಪುರ ಪೊಲೀಸರಿಗೆ ದೂರು ನೀಡಿದ್ದಾಗಿ ವರದಿಯಾಗಿದೆ. ಆ ಯುವಕ ಬರೋಬ್ಬರಿ ಐದು ಕೋಟಿಗಾಗಿ ಡಿಮ್ಯಾಂಡ್ ಮಾಡಿದ್ದಾನೆ. ಆತ ಬ್ಯ್ಲಾಕ್ ಮೇಲ್ ಮಾಡುತ್ತಿದ್ದಾನೆ ಎಂದು ದೂರು ಕೊಡಲಾಗಿದೆ.

ಪ್ರಜ್ವಲ್ ರೇವಣ್ಣ ಪ್ರಕರಣ ಇನ್ನೂ ಸುದ್ದಿಯಲ್ಲಿರುವಾಗಲೇ, ವಿಧಾನ ಪರಿಷತ್ ಸದಸ್ಯ ಡಾ. ಸೂರಜ್ ರೇವಣ್ಣ ಅವರ ಪ್ರಕರಣ ಬೆಳಕಿಗೆ ಬಂದಿದ್ದು, ಈ ಆರೋಪ ಪ್ರತ್ಯಾರೋಪ ಮುಂದೆ ಯಾವ ಹಂತಕ್ಕೆ ಹೋಗಲಿದೆ ಎಂದು ಕಾದು ನೋಡಬೇಕಿದೆ.

Related Articles

Latest Articles