ಮಲೆನಾಡಿನ ಕಾಡು ಜಾತಿಯ ಮರದಲ್ಲೇ ಅತ್ಯಂತ ಸುಂದರ ಆಕಾರದ ಮರವಿದು. ಡಿಸಂಬರ್ ಕೊನೆಯ ಭಾಗದಲ್ಲಿ ಕ್ರಿಸ್ಮಸ್ ಬರುವುದೂ ಮತ್ತು ಈ ಮರ ಕ್ರಿಸ್ಮಸ್ ಮರದಂತೆ ಹಣ್ಣು ತುಂಬಿ ಸಮೃದ್ಧ ವಾಗಿ ರುವುದು ಕಾಕತಾಳೀಯವೇ ಸರಿ… ಒಂದು ಅಡಿ ಉದ್ದದ ಮೂರು ಇಂಚು ಅಗಲದ ದಪ್ಪ ಎಲೆಯ ಸಸ್ಯವಿದು.
ಬರಹ: ಪ್ರಬಂಧ ಅಂಬುತೀರ್ಥ
ಈ ಮರ ಹಲಸು ಮಾವಿನ ಮರದ ತರ ಅಡ್ಡ ಟಿಸಿಲೊಡೆದು ಬೆಳೆಯದೇ ನೇರವಾಗಿ ಬೆಳೆಯುತ್ತದೆ. ಗೋಪುರ ದ ನಮೂನೆಯಲ್ಲಿ ಈ ಮರ ನೋಡುಗರ ಗಮನ ಸೆಳೆಯುವಂತೆ ಬೆಳೆದಿರುತ್ತದೆ.
ಇದು ಗಾರ್ಸಿನಿಯ ಝಂಟೋಸ್ಯೆಮಸ್ (garcinia xanthochymus) ಪ್ರಬೇಧಕ್ಕೆ ಸೇರಿದ ಭಾರತೀಯ ಮೂಲದ ಸಸ್ಯ. ನಮ್ಮ ಮಲೆನಾಡು ಮತ್ತು ಹಿಮಾಲಯದಲ್ಲಿ ಈ ಪ್ರಬೇಧವಿದೆ.
ಜೀರ್ಕನ ಹುಳಿ ಹಣ್ಣನ್ನು ಮರ ಹತ್ತಿ ಒಮ್ಮೆಗೆ ಮರದಿಂದ ಉದುರಿಸಿ ಮನೆಗೆ ತಂದು ಹಣ್ಣನ್ನು ಕಾಯಿಯನ್ನ. ಬೇರೆ ಬೇರೆ ಮಾಡಿ ಕಾಯಿಯನ್ನ ಹೆಚ್ಚಿ ಅದರಲ್ಲಿನ ಹಾಲಿನ ಅಂಶ (ಒಗರಿನ ಅಂಶ) ತೊಳೆದು ಒಣಗಿಸಿ ನಂತರ ನೀರು ಹಾಕಿ ಬೇಯಿಸಿ ಇಂಗಿಸುವುದು ಇದೇ ರೀತಿಯಲ್ಲಿ ಹಣ್ಣನ್ನೂ ಹೆಚ್ಚಿ ಒಣಗಿಸಿ ತದನಂತರ ಈ ಹಣ್ಣನ ಚೂರನ್ನು ದೊಡ್ಡ ಪಾತ್ರೆಯಲ್ಲಿ ಬೇಯಿಸಿ “ಹುಳಿ ” ತಯಾರಿಸಿ ಅದನ್ನು ದೊಡ್ಡ ಪಾತ್ರೆಯಲ್ಲಿ ಸಂಗ್ರಹಿಸಿಟ್ಟುಕೊಳ್ಳುತ್ತಾರೆ. ಒಂದು ಹತ್ತು ಲೀಟರ್ ನ ಹಣ್ಣಿನ pulp ಬೇಯಿಸಿ ಇಂಗಿಸಿದ ಮೇಲೆ ಮೂರು ಲೀಟರ್ ಆಗ ಬಹುದು. ಈ ಹುಳಿ ದ್ರಾವಣ ನೋಡಲು ಕಪ್ಪು ಇರುತ್ತದೆ. ಈ ಜೀರ್ಕನ ಹುಳಿ ಒಂದು ವರ್ಷದ ತನಕ ಅಡಿಗೆಗೆ ಬರುತ್ತದೆ.
ಹಿತಮಿತವಾಗಿ ಬಳಸಿದರೆ ಅದ್ಭುತವಾದ ರುಚಿ ಆರೋಗ್ಯ. ಹೆಚ್ಚು ಬಳಸಿದರೆ ಪಿತ್ತ ಎನ್ನುತ್ತಾರೆ. ಈ ಹುಳಿ ಹಣ್ಣಿನ ಹುಳಿ ರಸ ಮಾಂಸಾಹಾರಿ ಅಡುಗೆಗೆ ಅದರಲ್ಲೂ ಮೀನು ಪದಾರ್ಥಗಳಿಗೆ ಅತ್ಯುತ್ತಮವಂತೆ.
ಈ ಹುಳಿಯನ್ನ ಮಲೆನಾಡಿನಲ್ಲಿ ಆಡೊಳಿ ಅಂತ ಕರೀತಾರೆ.
ಈಗ ಪಟ್ಟಣದ ಹುಣಸೆ ಹುಳಿ ಬಂದ ಮೇಲೆ ಮಲೆನಾಡಿನ ಕಡೆ ಈ ಜನವರಿ ತಿಂಗಳಲ್ಲಿ ಫಸಲು ಕಟಾವಿಗೆ ಬರುವ ಜೀರ್ಕನ ಹುಳಿ ಸಂಗ್ರಹ ನಿಂತಿದೆ.
ಹುಣಸೆ ಹುಳಿಗಿಂತ ಈ ಹುಳಿ ಅತ್ಯಂತ ಆರೋಗ್ಯಕರ. ನಮ್ಮ ಆಹಾರ ಸಂಶೋಧನಾ ಕೇಂದ್ರ ದವರು ಈ ಹುಳಿ ಹಣ್ಣನ್ನು ಮೌಲ್ಯವರ್ಧನೆ ಮಾಡಲು ಯೋಜಿಸಿದರೆ ಈ ಜೀರ್ಕನ ಹುಳಿ ಮರ ಮಲೆನಾಡಿಗರಿಗೆ ಒಂದು ಅತ್ಯುತ್ತಮ ಲಾಭದಾಯಕ ಕೃಷಿ ಬೆಳೆಯಾಗಬಹುದು.
ಇವತ್ತಿನ ಆಹಾರ ತಂತ್ರಜ್ಞಾನದಲ್ಲಿ ಜೀರ್ಕನ ಹುಳಿ ಪೌಡರ್ ಮಾಡಬಹುದು,
ಟಿನ್ ಗಳಲ್ಲಿ ಹಾಕಿ ಮಾರುಕಟ್ಟೆ ಗೆ ಬಿಡುಗಡೆ ಮಾಡಬಹುದು. ಅನುಭವಿಗಳ ಅಂಬೋಣದಂತೆ ” ಜೀರ್ಕನ ಹುಳಿಯ ಮಾಂಸಾಹಾರಿ ಅಡುಗೆ ಉಂಡವರು ಜೀರ್ಕನ ಹುಳಿ ಮರವನ್ನು ಹುಡುಕಿಕೊಂಡು ಹೋಗ್ತಾರೆ …!!” ಎಂಬು ವಷ್ಟು ಜೀರ್ಕನ ಖ್ಯಾತಿ ಇದೆ.
ಇದನ್ನು ಕೃಷಿ ಮಾಡಿದರೆ ಒಂದು ಮರದಲ್ಲಿ ಹತ್ತು ವರ್ಷಗಳ ನಂತರ ಒಂದು ಕ್ವಿಂಟಾಲ್ ಬೆಳೆ ಬರಬಹುದು. ಎಕರೆ ಗೆ ನೂರು ಮರ ಸಲೀಸಾಗಿ ಬೆಳೆಸ ಬಹುದು. ಮೌಲ್ಯವರ್ಧನೆ ಮಾರುಕಟ್ಟೆ ಮಾಡಿದರೆ ಈ ಜೀರ್ಕನ ಹುಳಿ ಮರ ಮಲೆನಾಡಿಗರಿಗೆ ಅತ್ಯುತ್ತಮ ಆರ್ಥಿಕ ಉತ್ಪತ್ತಿ ತರುವ ಮರವಾಗುವುದರಲ್ಲಿ ಯಾವುದೇ ಅನುಮಾನವಿಲ್ಲ. ಅಡಿಕೆ ಯಂತಹ ಬೆಳೆಯಿಂದು ಎಲೆಚುಕ್ಕಿ ಶಿಲೀಂಧ್ರ ರೋಗದ ಆತಂಕದಲ್ಲಿರುವಾಗ ನಮ್ಮದೇ ಮಲೆನಾಡು ಮೂಲದ ಇಂತಹ ಹಣ್ಣು ಹುಳಿ ಔಷಧೀಯ ಸಸ್ಯ ಗಳನ್ನು ಸಂಬಂಧಿಸಿದ ಇಲಾಖೆ ಸಂಶೋಧನೆ ಅಭಿವೃದ್ಧಿ ಮಾಡಿದರೆ ಮಲೆನಾಡಿನ ರೈತ ಸಮೂದಾಯ ನಿಟ್ಟುಸಿರಿಡುತ್ತದೆ. ಜೊತೆಗೆ ಪ್ರಾಣಿ ಪಕ್ಷಿಗಳೂ ಉಳಿಯುತ್ತದೆ.
ಯಾವುದೋ ವಿದೇಶಿ ಹಣ್ಣಿನ ಬೆಳೆಗಿಂತ ಈ ಸ್ವದೇಶಿ ಬೆಳೆ ಉತ್ತಮ ಖಾತರಿ ಬೆಳೆ ಅಲ್ವಾ….??
ಅರಣ್ಯ ಇಲಾಖೆಯು ಮಂಗ ಇತರೆ ಕಾಡು ಪ್ರಾಣಿಗಳಿಗೆ ಜೀರ್ಕನ ಹುಳಿ ಯಂತಹ ಹಣ್ಣಿನ ಬೆಳೆಯನ್ನು ಆರಿಸಿ ತಮ್ಮ ಅರಣ್ಯ ಪ್ರದೇಶದಲ್ಲಿ ಬೆಳೆಸಿ ಕಾಡು ಪ್ರಾಣಿಗಳು ಊರಿನ ಕೃಷಿ ಬೆಳೆಯ ಮೇಲೆ ದಾಳಿ ಮಾಡದಂತೆ ತಡೆಯಬಹುದು…
ರಸ್ತೆಯ ಇಕ್ಕೆಲಗಳಲ್ಲಿ , ಪಾರ್ಕ್ ನಲ್ಲಿ , ಮನೆಗಳ ಎದುರು ಈ ಮರವನ್ನು ಬೆಳೆಸಿದರೆ ಅತ್ಯಂತ ಅಚ್ಚುಕಟ್ಟಾಗಿ ಸುಂದರವಾಗಿ ಬೆಳೆಯುತ್ತದೆ.
ಈ ಮರದ ಎಲೆ ವರಲೆ ನಿರೋಧಕ. ಹಿಂದೆ ಮರದ ಮುಚ್ಚಿಗೆ ಮಾಡುವಾಗ ಹಲಗೆ ಸೇರುವ ಓಣಿಯಲ್ಲಿ ಈ ಜೀರ್ಕನ ಹುಳಿ ಮರದ ಎಲೆಯನ್ನು ಇಟ್ಟು ಅದರ ಮೇಲೆ ಮಣ್ಣು ಹಾಕಿ ಸಮ ಮಟ್ಟ ಮಾಡುತ್ತಿದ್ದರು. ಇದು ನೂರು ವರ್ಷಗಳ ಕಾಲ ಹೀಗೆ ಮಣ್ಣಿನಡಿಯಲ್ಲಿ ಇದ್ದರೂ ಪುಡಿಯಾಗುತ್ತಿರಲಿಲ್ಲವಂತೆ. ಈ ಮರದ ಎಲೆ ಕೂಡ ಸಂಸ್ಕರಣೆ ಸಂಶೋಧನೆಗೆ ಅರ್ಹ.
ಇಂತಹ ಮಲೆನಾಡಿನ ನೈಸರ್ಗಿಕ ಆರೋಗ್ಯ ನೀಡುವ ಹುಳಿ ಯನ್ನು ಆಹಾರ ಸಂಶೋಧನಾ ಸಂಸ್ಥೆ ಗಳು ಮೌಲ್ಯವರ್ಧನೆ ಮಾಡುವ ಯೋಜನೆ ಮಾಡುವುದು ಮತ್ತು ಸರ್ಕಾರ ಈ ಹುಳಿ ಹಣ್ಣಿನ ಬೆಳೆಯನ್ನು ಕೃಷಿ ಗೆ ಪ್ರೋತ್ಸಾಹಿಸಿ ದರೆ ಮುಂದೆ ಅಡಿಕೆ ಬೆಳೆಗೆ ಖಂಡಿತವಾಗಿಯೂ ಪರ್ಯಾಯ ವಾಗಲು ಸಾದ್ಯ. ಈ ಮರದ ಹಣ್ಣಿನ ಬೀಜದಿಂದ ಗಿಡ ಮಾಡಬಹುದು. ಜೀರ್ಕನ ಹುಳಿ ಬೆಳೆ ಮಲೆನಾಡಿನಲ್ಲಿ ಅತ್ಯಂತ ಸುಲಭವಾಗಿ ಬೆಳೆಯುತ್ತದೆ .
ಯಾರಾದರೂ ಆಸಕ್ತರು ಈ ಬೆಳೆಯ ಬಗ್ಗೆ ಪ್ರಯತ್ನ ಮಾಡಬಹುದು.
ಬರಹ: ಪ್ರಬಂಧ ಅಂಬುತೀರ್ಥ