ಮಂಗಳೂರು: ಪ್ರತಿ ವರ್ಷ ಹೊಸ ವರ್ಷಾಚರಣೆ ವೇಳೆ ಕುಡಿದ ಮತ್ತಿನಲ್ಲಿ ಒಂದಲ್ಲಾ ಒಂದು ರೀತಿಯಲ್ಲಿ ಅಹಿತಕರ ಘಟನೆಗಳು ನಡೆಯುತ್ತವೆ. ಹಲ್ಲೆ, ಜಗಳ ಸಾಮಾನ್ಯವಾಗಿದೆ. ಕ್ಷುಲ್ಲಕ ಕಾರಣಕ್ಕೆ ಇಬ್ಬರ ಜಗಳ ನಡೆದು ಯುವಕನೊಬ್ಬನ ಮೂಗನ್ನೇ ಕಚ್ಚಿ ಕಿತ್ತು ಹಾಕಿದ ಘಟನೆ ನಡೆದಿದೆ.
ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಪಿಲ್ಯ ಗ್ರಾಮದಲ್ಲಿ ಹೊಸ ವರ್ಷಾಚರಣೆಯ ಪ್ರಯುಕ್ತ ಪಾರ್ಟಿ ನಡೆಸಲಾಗುತ್ತಿತ್ತು. ಈ ವೇಳೆ ಕುಡಿದ ಮತ್ತಿನಲ್ಲಿ ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ಮೂಲದ ರಾಕೇಶ್ ಮತ್ತು ಉಲ್ಪೆ ಗ್ರಾಮದ ನಿವಾಸಿ ದೀಕ್ಷಿತ್ (28) ನಡುವೆ ಕ್ಷುಲ್ಲಕ ಕಾರಣಕ್ಕೆ ಜಗಳ ಆರಂಭವಾಗಿದೆ.
ಇಬ್ಬರ ನಡುವೆ ಆರಂಭವಾದ ಜಗಳ ವಿಕೋಪಕ್ಕೆ ತಿರುಗಿದಾಗ ರಾಕೇಶ್ ದೀಕ್ಷಿತ್ನ ಮೂಗನ್ನು ಕಚ್ಚಿ ಅರ್ಧ ಭಾಗವನ್ನೇ ಕಿತ್ತು ಹಾಕಿದ್ದಾನೆ. ಗಾಯಾಳು ದೀಕ್ಷಿತ್ನನ್ನು ಗುರುವಾಯನಕೆರೆ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ.