ಹಳೆಯ ಕಟ್ಟಡದ ಮೇಲ್ಛಾವಣಿ ಕೆಡಹುವ ಸಂದರ್ಭದಲ್ಲಿ ಕೆಳಗೆ ಬಿದ್ದು ಕಂಬಳ ಕೋಣಗಳ ಯಜಮಾನ ಮೃತಪಟ್ಟ ಘಟನೆ ಬಂಟ್ವಾಳ ತಾಲೂಕಿನ ಬಡಗಕಜೆಕಾರು ಗ್ರಾಮ ಪಂಚಾಯತ್ ವ್ಯಾಪ್ತಿಯ ತೆಂಕಕಜೆಕಾರು ಎನ್ನುವಲ್ಲಿ ಡಿ. 11ರಂದು ಸಂಭವಿಸಿದೆ.
ಬಡಗಕಜೆಕಾರು ಗ್ರಾಮದ ಕುಲೆಂಜಿಕೋಡಿ ನಿವಾಸಿ ಸುಂದರ ಪೂಜಾರಿ (55) ಮೃತಪಟ್ಟವರು.
ಮೇಸ್ತ್ರಿ ಕೆಲಸ ಮಾಡುತ್ತಿದ್ದ ಸುಂದರ ಪೂಜಾರಿ ಅವರು ತೆಂಕಕಜೆಕಾರಿನ ವಿಜಯಾ ಅವರ ದೈವಸ್ಥಾನದ ಕಟ್ಟಡ ಕೆಡಹುವ ಕೆಲಸಕ್ಕೆ ಹೋಗಿದ್ದು, ಗೋಡೆಯ ಮೇಲಿನಿಂದ ಸ್ಲಾ$Âಬ್ ತೆಗೆಯುವ ವೇಳೆ ಸ್ಲ್ಯಾಬ್ ಸಹಿತ ಕೆಳಕ್ಕೆ ಬಿದ್ದಿದ್ದರು. ಗಂಭೀರ ಗಾಯಗೊಂಡ ಅವರನ್ನು ತತ್‌ಕ್ಷಣ ಬಂಟ್ವಾಳ ಸರಕಾರಿ ಆಸ್ಪತ್ರೆಗೆ ಸಾಗಿಸಲಾಯಿತಾದರೂ, ಅದಾಗಲೆ ಅವರು ಮೃತಪಟ್ಟಿದ್ದರು.
ಘಟನೆ ಬಗ್ಗೆ ಪುಂಜಾಲಕಟ್ಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮೃತರು ಪತ್ನಿ, ಪುತ್ರ ಹಾಗೂ ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ.
ಸುಂದರ ಪೂಜಾರಿ ಅವರು ಕಳೆದ 6 ವರ್ಷಗಳಿಂದ ಕಂಬಳ ಕೋಣಗಳ ಯಜಮಾನರಾಗಿದ್ದು, ಅವರ ಓಟದ ಕೋಣಗಳು ಹಲವಾರು ಪ್ರಶಸ್ತಿ ಪಡೆದಿದ್ದವು.