Monday, September 16, 2024

ಬೆಂಗಳೂರಲ್ಲಿ ಸರಣಿ ವಿಧ್ವಂಸಕ ಕೃತ್ಯಕ್ಕೆ ಸಂಚು; 5 ಶಂಕಿತ ಉಗ್ರರ ಮನೆ ಮೇಲೆ ಎನ್‌ಐಎ ದಾಳಿ!

ಕೆಲ ತಿಂಗಳ ಹಿಂದೆ ಬೆಂಗಳೂರಿನ ಸರಣಿ ವಿಧ್ವಂಸಕ ಕೃತ್ಯಕ್ಕೆ ಸಂಚು ರೂಪಿಸಿದ ಪ್ರಕರಣ ಸಂಬಂಧ ಬಂಧಿತರಾಗಿದ್ದ ಲಷ್ಕರ್ -ಎ-ತೋಯ್ದಾ (ಎಲ್‌ಇಟಿ) ಸಂಘಟನೆಯ ಶಂಕಿತ ಐವರು ಉಗ್ರರ ಮನೆಗಳ ಮೇಲೆ ರಾಷ್ಟ್ರೀಯ ತನಿಖಾ ದಳ (ಎನ್‌ಐಎ) ದಾಳಿ ನಡೆಸಿ ಕೆಲ ದಾಖಲೆಗಳನ್ನು ಜಪ್ತಿ ಮಾಡಿದೆ.

ಪುಲಕೇಶಿನಗರ, ಹೆಬ್ಬಾಳ, ಆ‌ರ್.ಟಿ.ನಗರ ಹಾಗೂ ಕೊಡಿಗೇಹಳ್ಳಿ ಸೇರಿದಂತೆ ನಗರದ ಒಟ್ಟು 6 ಕಡೆ ಎನ್‌ಐಎ ದಾಳಿ ನಡೆಸಿದ್ದು, ಶಂಕಿತರ ಉಗ್ರರ ಸಂಪರ್ಕ ಜಾಲದ ಶೋಧನೆಯನ್ನು ನಡೆಸಿದೆ. ಈ ವೇಳೆ ಡಿಜಿಟಲ್ ಸಾಕ್ಷ್ಯಗಳು, 7.3 ಲಕ್ಷ ರು ನಗದು ಹಾಗೂ ಕೆಲ ದಾಖಲೆಗಳನ್ನು ಜಪ್ತಿ ಮಾಡಲಾಗಿದೆ ಎಂದು ಎನ್‌ಐಎ ಹೇಳಿದೆ.

ವಿಧ್ವಂಸಕ ಕೃತ್ಯ ಸಂಚು ರೂಪಿಸಿದ ಮಾಹಿತಿ ಪಡೆದ ಸಿಸಿಬಿ, ಇದೇ ವರ್ಷದ ಜು.19 ರಂದು ಹೆಬ್ಬಾಳ ಸಮೀಪದ ಸುಲ್ತಾನ್ ಪಾಳ್ಯದ ಸೈಯದ್ ಸುಹೇಲ್‌ಖಾನ್ ಮನೆ ಮೇಲೆ ದಾಳಿ ನಡೆಸಿತ್ತು. ಆಗ ಸುಹೇಲ್, ಪುಲಿಕೇಶಿ ನಗರದ ಮೊಹಮದ್ ಫೈಜಲ್ ರಬ್ಬಾನಿ, ಕೊಡಿಗೇಹಳ್ಳಿಯ ಮಹಮದ್ ಉಮರ್, ಜಾಹೀದ್ ತಬ್ರೇಜ್ ಹಾಗೂ ಆರ್ .ಟಿ.ನಗರದ ಸೈಯದ್ ಮುದಾಸೀರ್‌ಪಾಷ ಸೇರಿ ಐವರು ಶಂಕಿತ ಉಗ್ರರನ್ನು ಬಂಧಿಸಿತ್ತು. ಆರೋಪಿಗಳಿಂದ 7 ನಾಡಾ ಪಿಸ್ತೂಲ್‌ ಗಳು, 45 ಜೀವಂತ ಗುಂಡುಗಳು ವಾಕಿಟಾಕಿ ಸೆಟ್ಸ್, ಡ್ರ್ಯಾಗರ್, ಗ್ರೆನೈಡ್‌ಗಳು ಹಾಗೂ 13 ಮೊಬೈಲ್ ಗಳು ಜಪ್ತಿಯಾಗಿದ್ದವು.

ಇನ್ನು ಈ ತಂಡದ ಮಾಸ್ಟರ್ ಮೈಂಡ್ ಜುನೈದ್ ಅಹ್ಮದ್ ಸೇರಿದಂತೆ ಮೂವರು ವಿದೇಶದಲ್ಲಿ ತಲೆಮರೆಸಿಕೊಂಡಿದ್ದಾರೆ. ಈ ಶಂಕಿತ ಉಗ್ರರಿಗೆ ಜಿಹಾದ್ ಬೋಧಿಸಿರುವುದು ಎಲ್‌ಇಟಿಗೆ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿರುವ 2008ರ ಬೆಂಗಳೂರು ಸರಣಿ ಬಾಂಬ್ ಸೋಟ ಪ್ರಕರಣದ ಆರೋಪಿ ಶಂಕಿತ ಉಗ್ರ ಟಿ.ನಾಸಿರ್ ಎಂಬುದು ಸಿಸಿಬಿ ತನಿಖೆಯಲ್ಲಿ ಬಯಲಾಗಿತ್ತು. ಈ ಪ್ರಕರಣವು ಬಳಿಕ ಎನ್‌ಐಎಗೆ ವರ್ಗವಾಗಿತ್ತು.

Related Articles

Latest Articles