ನೋಡಿಕೊಂಡು ನಿಧಾನವಾಗಿ ಕಾರು ಚಲಾಯಿಸಿ ಎಂದಿದ್ದಕ್ಕೆ ಯುವಕ ಹಾಗೂ ಆತನ ಸಹೋದರಿ ಮೇಲೆ ‘ನಾ ಡ್ರೈವರ್’ ಹಾಡಿನ ಖ್ಯಾತಿಯ ಗಾಯಕ ಮಾಳು ನಿಪನಾಳ್ ಹಲ್ಲೆ ಮಾಡಿದ್ದು, ಗಾಯಗೊಂಡ ಇಬ್ಬರೂ ಆಸ್ಪತ್ರೆಗೆ ದಾಖಲಾಗಿದ್ದಾರೆ.
ಶೇಖಪ್ಪ ಹಕ್ಯಾಗೋಳ ಹಾಗೂ ಸಹೋದರಿಗೆ ಗಾಯವಾಗಿದ್ದು, ಚಿಕ್ಕೋಡಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ರಾಯಬಾಗ ತಾಲೂಕಿನ ನಿಪನಾಳ ಗ್ರಾಮದ ಹೊರವಲಯದಲ್ಲಿ ಯುವಕ ಹಾಗೂ ಆತನ ಸಹೋದರಿ ಬೈಕ್ ಮೇಲೆ ಸಂಚರಿಸುತ್ತಿದ್ದರು. ಈ ವೇಳೆ ನಾ ಡ್ರೈವರ್ ಹಾಡಿನ ಗಾಯಕ ಮಾಳು ನಿಪನಾಳ ಹಾಗೂ ಆತನ ಸ್ನೇಹಿತರು ಕಾರಿನಲ್ಲಿ ತೆರಳುವ ವೇಳೆ ಎದುರಿಗಿದ್ದ ಯುವಕನ ಬೈಕ್ ಮೇಲೆ ಜೋರಾಗಿ ಕಾರು ಬಂದಿದೆ. ಆಗ ಬೈಕ್ ಮೇಲಿದ್ದ ಮಹಿಳೆ, ‘ನೋಡಿಕೊಂಡು ಕಾರು ಓಡಿಸಿ’ ಎಂದು ಹೇಳುತ್ತಿದ್ದಂತೆ ಮಾಳು ನಿಪನಾಳ ಹಾಗೂ ಆತನ ಸ್ನೇಹಿತರು ಹಲ್ಲೆ ನಡೆಸಿದ್ದಾರೆ.
ಸಾವಕಾಶವಾಗಿ ಕಾರು ಓಡಿಸಿ ಎಂದು ಹೇಳಿದ್ದಕ್ಕೆ ಆರೋಪಿಗಳು ಹಲ್ಲೆಗೆ ಮುಂದಾಗಿದ್ದಾರೆ. ಈ ಸಂದರ್ಭದಲ್ಲಿ ಮಹಿಳೆ ಮೇಲೆ ಹಲ್ಲೆ ನಡೆಸಿದ್ದಾರೆ. ಇದಕ್ಕೂ ಮೊದಲು ಗಾಯಕ ಮಾಳು ನಿಪನಾಳ ಮೇಲೆ ಮೂರು ಪ್ರಕರಣ ದಾಖಲಾಗಿವೆ.
ಈ ಬಗ್ಗೆ ಪ್ರತಿಕ್ರಿಯಿಸಿರುವ ಬೆಳಗಾವಿ ಎಸ್ ಪಿ ಭೀಮಾಶಂಕರ ಗುಳೇದ, ಜಾನಪದ ಕಲಾವಿದ ಮಾಳು ನಿಪನಾಳ ಎಂಬಾತ ಕೆಲವರ ಮೇಲೆ ಹಲ್ಲೆ ಮಾಡಿರುವುದು ಸ್ಥಳೀಯ ಪೊಲೀಸ್ ಠಾಣೆಯಲ್ಲಿ ವಿಚಾರಿಸಿದಾಗ ಈತ ಹಲ್ಲೆ ಮಾಡಿದ್ದು ಮೇಲ್ನೋಟಕ್ಕೆ ನಿಜವಾಗಿದೆ. ಪ್ರಕರಣದಲ್ಲಿ ನೊಂದ ಶೇಖಪ್ಪ ಹಕ್ಯಾಗೋಳ ಹಾಗೂ ಆತನ ಸಂಬಂಧಿಕರು ಚಿಕ್ಕೋಡಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈಗಾಗಲೇ ನೊಂದವರಿಗೆ ನಮ್ಮ ಪೊಲೀಸರು ಕರೆ ಮಾಡಿ ಪ್ರಕರಣ ದಾಖಲಿಸುವಂತೆ ಹೇಳಿದ್ದಾರೆ. ಅವರು ನಾವು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು ಆಮೇಲೆ ಪ್ರಕರಣ ದಾಖಲಿಸುವುದಾಗಿ ಹೇಳಿದ್ದಾರೆ. ಯಾರೂ ಕಾನೂನಿಗಿಂತ ದೊಡ್ಡವರಲ್ಲ. ಕಾನೂನು ಕೈಗೆ ತೆಗೆದುಕೊಂಡರೆ ಅವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುತ್ತೇವೆ ಎಂಬ ಎಚ್ಚರಿಕೆ ನೀಡಿದರು.