Tuesday, March 18, 2025

ಕೆಫೆ ಬಾಂಬ್ ಸ್ಫೋಟ: 9 ನಿಮಿಷಗಳ ಕಾಲ ಒಳಗೆ ಕುಳಿತಿದ್ದ ಶಂಕಿತ ವ್ಯಕ್ತಿ! ದೃಶ್ಯ ಸಿಸಿಟಿವಿಯಲ್ಲಿ ಸೆರೆ

ಬೆಂಗಳೂರಿನ ಹೆಸರಾಂತ ರಾಮೇಶ್ವರಂ ಕೆಫೆಯೊಂದರ ಮೇಲೆ ಬಾಂಬ್ ದಾಳಿ ನಡೆಸಿದ ಶಂಕಿತ ಆರೋಪಿ ಹೋಟೆಲ್​ವೊಳಗೆ ಒಂಬತ್ತು ನಿಮಿಷಗಳನ್ನು ಕಳೆದಿದ್ದು, ಅಲ್ಲಿಂದ ಹೊರಡುವ ಮುನ್ನ ಸೆರೆಯಾದ ದೃಶ್ಯಗಳು ಸಿಸಿಟಿವಿಯಲ್ಲಿ ದಾಖಲಾಗಿದ್ದು, ಇದೀಗ ದೃಶ್ಯಾವಳಿಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿವೆ.

ಹೊಸ ವಿಡಿಯೋ ತುಣುಕಿನಲ್ಲಿ ಶಂಕಿತ ವ್ಯಕ್ತಿ ಸನ್‌ಗ್ಲಾಸ್, ಮಾಸ್ಕ್ ಮತ್ತು ಬೇಸ್‌ಬಾಲ್ ಟೋಪಿ ಧರಿಸಿ ಬಸ್ ನಿಲ್ದಾಣದಿಂದ ರಾಮೇಶ್ವರಂ ಕೆಫೆ ಕಡೆಗೆ ಹೋಗುತ್ತಿರುವುದನ್ನು ತೋರಿಸುತ್ತದೆ. ಶುಕ್ರವಾರ ಬೆಳಗ್ಗೆ 11.34ಕ್ಕೆ ಬೆಂಗಳೂರಿನ ಬ್ರೂಕ್‌ಫೀಲ್ಡ್‌ನಲ್ಲಿರುವ ಕೆಫೆಗೆ ಪ್ರವೇಶಿಸಿದ ಆತ ಮೊಬೈಲ್‌ನಲ್ಲಿ ಮಾತನಾಡುತ್ತಿರುವುದು ಕಂಡುಬಂದಿದೆ.

ಮತ್ತೊಂದು ದೃಶ್ಯ ಶಂಕಿತ ವ್ಯಕ್ತಿಯು 11.43ಕ್ಕೆ ಕೆಫೆಯಿಂದ ಹೊರಹೋಗುವುದನ್ನು ತೋರಿಸುತ್ತದೆ. ಬಂದಷ್ಟೇ ಆತುರದಿಂದ ಆತ ಹೊರಗೆ ಹೋಗಿರುವುದು ಕೂಡ ವಿಡಿಯೋದಲ್ಲಿ ಕಾಣಿಸಿದೆ. ಸದ್ಯ ಶಂಕಿತ ಆರೋಪಿ ರಾಮೇಶ್ವರಂ ಕೆಫೆಯಲ್ಲಿ ಕೇವಲ ಒಂಬತ್ತು ನಿಮಿಷಗಳ ಕಾಲ ಕಳೆದಿದ್ದಾನೆ ಎಂದು ಸಿಸಿಟಿವಿ ಸಾಕ್ಷ್ಯಗಳು ತೋರಿಸಿವೆ.

ಸದ್ಯ ಈ ಪ್ರಕರಣ ಇದೀಗ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ಕೈಸೇರಿದ್ದು, ತನಿಖೆ ಚುರುಕಿನಿಂದ ಸಾಗುತ್ತಿದೆ. ಇದಕ್ಕೂ ಮುನ್ನ ಬೆಂಗಳೂರು ಪೊಲೀಸರು ಕೆಫೆಯಲ್ಲಿ ನಡೆದ ಸ್ಫೋಟಕ್ಕೆ ಸಂಬಂಧಿಸಿದಂತೆ ಕಾನೂನುಬಾಹಿರ ಚಟುವಟಿಕೆಗಳ (ತಡೆ) ಕಾಯ್ದೆ ಮತ್ತು ಸ್ಫೋಟಕ ವಸ್ತುಗಳ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡಿದ್ದರು.

Related Articles

Latest Articles