Tuesday, January 21, 2025

ಕಿಡ್ನಾಪ್ ಆಗಿದ್ದ ಯುವಕ‌ ಹೆಣವಾಗಿ ಪತ್ತೆ

ಬೆಂಗಳೂರು: ಸಿನಿಮೀಯ ಶೈಲಿಯಲ್ಲಿ ಕಿಡ್ನಾಪ್ ಆಗಿದ್ದ ಯುವಕನ ಮೃತದೇಹ ನೆಲಮಂಗಲದ ಚಿಕ್ಕಚಿಕ್ಕನಹಳ್ಳಿ ಬಳಿ ಪತ್ತೆಯಾಗಿದೆ. ಬಾಗಲಗುಂಟೆ ಪೊಲೀಸ್ ಠಾಣೆಯಲ್ಲಿ ಪೋಷಕರು ನಾಪತ್ತೆ ದೂರು ಕೊಟ್ಟ ನಂತರ ಅಪಹರಣ ಮತ್ತು ಕೊಲೆ ಪ್ರಕರಣ ಬೆಳಕಿಗೆ ಬಂದಿದೆ.

ಡಿಪ್ಲೊಮಾ ಇಂಜಿನಿಯರಿಂಗ್ ಮಾಡಿದ್ದ ದಾವಣಗೆರೆ ಮೂಲದ ಯುವಕ ಲೋಕೇಶ್ ಎಂಬವರು ಪೀಣ್ಯ ಬಳಿಯ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದರು. ಎಂದಿನಂತೆ ಅಕ್ಟೋಬರ್ 5 ರಂದು ಕಚೇರಿ ಕೆಲಸ ಮುಗಿಸಿ ನಾಗಸಂದ್ರ ಬಳಿ ಬರುತ್ತಿದ್ದ ಲೋಕೇಶ್, ಇನ್ನೇನು ಮನೆಗೆ ತಲುಪುವ ವೇಳೆ ಕಿಡ್ನಾಪ್ ಆಗಿದ್ದಾರೆ.

ಇತ್ತ, ಮಗ ಮನೆಗೆ ಬಾರದ್ದನ್ನು ನೋಡಿ ಗಾಬರಿಗೊಂಡ ಪೋಷಕರು, ಬಾಗಲಗುಂಟೆ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ನಾಪತ್ತೆ ಪ್ರಕರಣ ದಾಖಲಿಸಿಕೊಂಡ ಪೊಲೀಸರು, ದಾರಿಯಲ್ಲಿದ್ದ ಸಿಸಿಟಿವಿ ಪರಿಶೀಲನೆ ನಡೆಸಿದ್ದಾರೆ. ಈ ವೇಳೆ ಕಿಡ್ನಾಫ್ ಆಗಿರುವುದು ತಿಳಿದು ಬಂದಿದೆ.

ಇಬ್ಬರು ವ್ಯಕ್ತಿಗಳು ಲೋಕೇಶ್ ಅವರನ್ನು ಬಾಗಲಗುಂಟೆ ಪೊಲೀಸ್ ಠಾಣೆ ವ್ಯಾಪ್ತಿಯ ಹೆದ್ದಾರಿ ಪಕ್ಕದಲ್ಲಿ ಬಲವಂತವಾಗಿ ಬೈಕ್​ನಲ್ಲಿ ಕೂರಿಸಿ ಕಿಡ್ನಾಪ್ ಮಾಡಿದ್ದಾರೆ. ಅಕ್ಟೋಬರ್ 5 ರಂದು ಕಿಡ್ನಾಪ್ ಮಾಡಲಾಗಿದ್ದು, 8 ರಂದು ನೆಲಮಂಗಲದ ಚಿಕ್ಕಕುಕ್ಕನಹಳ್ಳಿ ಬಳಿ ಮೃತದೇಹ ಪತ್ತೆಯಾಗಿದೆ.

ಸದ್ಯ, ಪ್ರಕರಣ ದಾಖಲಿಸಿಕೊಂಡ ಮಾದನಾಯಕನಹಳ್ಳಿ ಠಾಣಾ ಪೊಲೀಸರು, ತನಿಖೆ ಆರಂಭಿಸಿದ್ದಾರೆ. ಲೋಕೇಶ್​ ಅವನರನ್ನು ಕಿಡ್ನಾಪ್ ಮಾಡಿದ್ದು ಯಾರು? ಕೊಲೆ ಮಾಡಿದ್ದು ಯಾರು? ಕೊಲೆಯಾಗಿದ್ದು ಎಲ್ಲಿ ಎಂಬಿತ್ಯಾದಿ ವಿಚಾರವಾಗಿ ತನಿಖೆ ನಡೆಸುತ್ತಿದ್ದಾರೆ.

Related Articles

Latest Articles