ಮದುವೆ ಸಂಭ್ರಮದಲ್ಲಿದ್ದ ಕುಟುಂಬ ಸೂತಕದ ಛಾಯೆಯಲ್ಲಿ ಮುಳುಗಿದ ದಾರುಣ ಘಟನೆ ನಡೆದಿದೆ. ಕೆಲವೇ ಗಂಟೆಗಳಲ್ಲಿ ಹಸೆಮಣೆ ಏರಬೇಕಾಗಿದ್ದ ವರ ಮಸಣ ಸೇರಿದ್ದಾನೆ. ಇಂತಹದೊಂದು
ದಾರುಣ ಘಟನೆ ಉತ್ತರ ಪ್ರದೇಶದ ಹತ್ರಾಸ್‌ನಲ್ಲಿ ನಡೆದಿದೆ.
ಮದುವೆಗೆ ಒಂದು ದಿನ ಮೊದಲು ಮದುಮಗ ಸಂಬಂಧಿಕರೊಂದಿಗೆ ಡ್ಯಾನ್ಸ್ ಮಾಡುವಾಗ ಹೃದಯಾಘಾತಕ್ಕೆ ಒಳಗಾಗಿದ್ದಾರೆ. ಖುಷಿಯಿಂದ ಡ್ಯಾನ್ಸ್ ಮಾಡಿದ ಮದುಮಗ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ. ಈ ದುರಂತ ಘಟನೆ ಕ್ಯಾಮರಾದಲ್ಲಿ ಸೆರೆಯಾಗಿದ್ದು, ಈ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.
ವರನನ್ನು ಹತ್ರಾಸ್ನ 22 ವರ್ಷದ ಶಿವಂ ಎಂದು ಗುರುತಿಸಲಾಗಿದ್ದು, ಆಗ್ರಾದ ನಿವಾಸಿ ಮೋಹಿನಿಯೊಂದಿಗೆ ಸೋಮವಾರ (ನವೆಂಬರ್ 18) ಅವರ ವಿವಾಹವನ್ನು ನಿಗದಿಪಡಿಸಲಾಗಿತ್ತು. ಭಾನುವಾರ ಸಂಜೆಯಿಂದಲೇ ವಿವಾಹ ಪೂರ್ವ ಕಾರ್ಯಕ್ರಮಗಳು ಆರಂಭವಾಗಿದ್ದು, ಅತಿಥಿಗಳೂ ಆಗಮಿಸಿದ್ದರು. ವರ ಭಾನುವಾರ ರಾತ್ರಿ ಸಂಬಂಧಿಕರ ಜೊತೆ ಉತ್ಸಾಹದಿಂದ ನೃತ್ಯ ಮಾಡುತ್ತಿದ್ದು, ನಂತರ ಕುರ್ಚಿಯ ಮೇಲೆ ಕುಳಿತುಕೊಳ್ಳಲು ಹೋಗಿದ್ದಾರೆ. ಅಲ್ಲಿ ಅವರು ಇದ್ದಕ್ಕಿದ್ದಂತೆ ಕುಸಿದು ಬಿದ್ದು ಮೃತಪಟ್ಟಿದ್ದಾರೆ.