ತಮಿಳುನಾಡಿನ ತಂಜಾವೂರು ಜಿಲ್ಲೆಯ ಮಲ್ಲಿಪಟ್ಟಿನಂ ಸರ್ಕಾರಿ ಹೈಯರ್ ಸೆಕೆಂಡರಿ ಶಾಲೆಯಲ್ಲಿ ಶಿಕ್ಷಕಿಯನ್ನು ಭೀಕರವಾಗಿ ಇರೊದು ಹತ್ಯೆಗೈದ ಘಟನೆ ನಡೆದಿದೆ. 26 ವರ್ಷದ ಶಾಲಾ ಶಿಕ್ಷಕಿ ರಮಣಿ ಮೃತಪಟ್ಟಾಕೆ. ಮದನ್ ಎಂಬಾತ ವಿದ್ಯಾರ್ಥಿಗಳು ಮತ್ತು ಇತರ ಶಿಕ್ಷಕರ ಎದುರಲ್ಲೇ ರಮಣಿಯ ಮೇಲೆ ಹಲ್ಲೆ ಮಾಡಿದ್ದಾನೆ. ಬಳಿಕ ಮದನ್ನನ್ನು ಪೊಲೀಸರು ಬಂಧಿಸಿದ್ದಾರೆ.
ಪೊಲೀಸ್ ಮೂಲಗಳ ಪ್ರಕಾರ, ರಮಣಿ ಮತ್ತು ಮದನ್ ಪ್ರೇಮಿಗಳಾಗಿದ್ದರು. ಇದಕ್ಕೆ ರಮಣಿ ಅವರ ಕುಟುಂಬ ತೀವ್ರ ವಿರೋಧವನ್ನು ವ್ಯಕ್ತಪಡಿಸಿತ್ತು. ಇತ್ತೀಚೆಗೆ ಮದನ್ನ ಮದುವೆಯ ಪ್ರಸ್ತಾಪವನ್ನು ರಮಣಿ ತಿರಸ್ಕರಿಸಿದ ನಂತರ ಇಬ್ಬರ ನಡುವೆ ಜಗಳ ಹೆಚ್ಚಾಯಿತು. ಇದು ಮಾರಣಾಂತಿಕ ಹಲ್ಲೆಗೆ ಕಾರಣವಾಗಿದ್ದು, ಕೋಪದ ಭರದಲ್ಲಿ ಮದನ್ ರಮಣಿಗೆ ಇರಿದಿದ್ದಾನೆ.
ತೀವ್ರವಾಗಿ ಗಾಯಗೊಂಡಿರುವ ರಮಣಿಯನ್ನು ರಕ್ಷಿಸುವ ಪ್ರಯತ್ನದಲ್ಲಿ ವಿದ್ಯಾರ್ಥಿಗಳು ಆಕೆಯನ್ನು ಹೊತ್ತೊಯ್ದ ವಿಡಿಯೋ ಶಾಲೆಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಆದರೆ, ಆಸ್ಪತ್ರೆಗೆ ಸಾಗಿಸುವ ಮಾರ್ಗಮಧ್ಯೆ ಶಿಕ್ಷಕಿ ಮೃತಪಟ್ಟಿದ್ದಾರೆ. ಘಟನೆ ನಡೆದ ಬೆನ್ನಲ್ಲೇ ಪೊಲೀಸರು ಮದನ್ನನ್ನು ಹಿಡಿದು ತನಿಖೆ ಆರಂಭಿಸಿದ್ದಾರೆ.