ಕ್ರೀಡಾ ಲೋಕದ ಬೃಹತ್ ಹಬ್ಬ ಎಂದರೆ ಅದು ಒಲಿಂಪಿಕ್ಸ್. ಕ್ರೀಡಾ ಪ್ರೇಮಿಗಳ ಚಿತ್ತ ಪ್ಯಾರಿಸ್ ಒಲಿಂಪಿಕ್‌ನತ್ತ ನೆಟ್ಟಿದೆ. ಕಳೆದ ಕೆಲವು ಒಲಿಂಪಿಕ್ಸ್ ಆವೃತ್ತಿಗಳಲ್ಲಿ ಕುಸ್ತಿ ವಿಭಾಗದಲ್ಲಿ ಗಮನಾರ್ಹ ಪ್ರದರ್ಶನ ನೀಡಿರುವ ಭಾರತ, ಈ ಬಾರಿಯೂ ಈ ಕ್ರೀಡೆಯಲ್ಲಿ ಹಲವು ಪದಕಗಳ ನಿರೀಕ್ಷೆಯಲ್ಲಿದೆ.
ಇದರಲ್ಲಿ 50 ಕೆಜಿ ತೂಕ ವಿಭಾಗದಲ್ಲಿ ಭಾರತವನ್ನು ಪ್ರತಿನಿಧಿಸುತ್ತಿರುವ ಹರಿಯಾಣದ ಕುಸ್ತಿಪಟು ವಿನೇಶ್ ಫೋಗಟ್ ಕೂಡ ಸೇರಿದ್ದಾರೆ. ಇದು ವಿನೇಶ್ ಫೋಗಟ್ ಅವರ ಮೂರನೇ ಒಲಿಂಪಿಕ್ಸ್ ಆಗಿದೆಯಾದರೂ, ಇಲ್ಲಿಯವರೆಗೆ ಒಲಿಂಪಿಕ್ಸ್‌ನಲ್ಲಿ ಒಮ್ಮೆಯೂ ಪದಕ ಗೆಲ್ಲಲು ಅವರಿಗೆ ಸಾಧ್ಯವಾಗಿಲ್ಲ. ಆದರೆ ಈ ಬಾರಿ ಅವರ ಮೇಲೆ ಅಭಿಮಾನಿಗಳು ಸಾಕಷ್ಟು ನಿರೀಕ್ಷೆ ಇಟ್ಟುಕೊಂಡಿದ್ದಾರೆ.
ಕುಸ್ತಿಯಲ್ಲಿ ಭಾರತ ಇದುವರೆಗೆ ಏಳು ಪದಕಗಳನ್ನು ಗೆದ್ದಿದೆ. ಕಳೆದ ನಾಲ್ಕು ಒಲಿಂಪಿಕ್ಸ್‌ಗಳಲ್ಲಿ ಭಾರತ ಈ ಕ್ರೀಡೆಯಲ್ಲಿ ಪದಕ ಗೆದ್ದಿದೆ. ಹಾಗಾಗಿಯೇ ಕುಸ್ತಿಪಟುಗಳು ಈ ಬಾರಿಯೂ ಪದಕದ ನಿರೀಕ್ಷೆಯಲ್ಲಿದ್ದಾರೆ.ಭಾರತ ಆರು ಕೋಟಾಗಳಲ್ಲಿ ಅರ್ಹತೆ ಪಡೆಯುವಲ್ಲಿ ಯಶಸ್ವಿಯಾಗಿದೆ. ಇವರಲ್ಲಿ 50 ಕೆಜಿ ತೂಕ ವಿಭಾಗದಲ್ಲಿ ದೇಶವನ್ನು ಪ್ರತಿನಿಧಿಸುತ್ತಿರುವ ವಿನೇಶ್ ಫೋಗಟ್ ಕೂಡ ಸೇರಿದ್ದಾರೆ.
ಏಷ್ಯನ್ ಚಾಂಪಿಯನ್‌ಶಿಪ್‌ಗಳಲ್ಲಿ 3 ಕಾಮನ್‌ವೆಲ್ತ್ ಗೇಮ್ಸ್ ಚಿನ್ನದ ಪದಕಗಳು, ಒಂದು ಏಷ್ಯನ್ ಗೇಮ್ಸ್ ಚಿನ್ನ, 2 ವಿಶ್ವ ಚಾಂಪಿಯನ್‌ಶಿಪ್ ಪದಕಗಳು, ಒಂದು ಚಿನ್ನ ಮತ್ತು 3 ಬೆಳ್ಳಿ ಸೇರಿದಂತೆ ಒಟ್ಟು 8 ಪದಕಗಳನ್ನು ಗೆದ್ದಿದ್ದಾರೆ. 2018 ರಲ್ಲಿ ಗೋಲ್ಡ್ ಕೋಸ್ಟ್ ಕಾಮನ್ವೆಲ್ತ್ ಕ್ರೀಡಾಕೂಟದಲ್ಲಿ ಚಿನ್ನ, ಅದೇ ವರ್ಷ ನಡೆದ ಏಷ್ಯನ್ ಗೇಮ್ಸ್ನಲ್ಲೂ ಚಿನ್ನದ ಪದಕ ಗೆಲ್ಲುವ ಮೂಲಕ ಏಷ್ಯಾಡ್‌ನಲ್ಲಿ ಚಿನ್ನ ಗೆದ್ದ ಮೊದಲ ಭಾರತೀಯ ಮಹಿಳಾ ಕುಸ್ತಿಪಟು ಎಂಬ ಹೆಗ್ಗಳಿಕೆಗೆ ಪಾತ್ರರಾದರು.