Wednesday, July 24, 2024

90 ಲಕ್ಷ ರೂಪಾಯಿ ಕದ್ದ ಯುವತಿ..! ಹಳೇ ಕಾರು ಖರೀದಿಸಿ ಮನಾಲಿ ಟೂರ್‌..! ಅಜ್ಜನ ಪಾಲಿಗೆ ಮೊಮ್ಮಗಳೇ ವಿಲನ್

ಜೈಪುರ: ಅಜ್ಜನ ಮನೆಯಲ್ಲಿ ಮೊಮ್ಮಗಳೇ 90 ಲಕ್ಷ ರೂಪಾಯಿ ಕದ್ದು ಪರಾರಿಯಾಗಿರುವ ಅಚ್ಚರಿಯ ಘಟನೆ ರಾಜಸ್ಥಾನದಲ್ಲಿ ಬೆಳಕಿಗೆ ಬಂದಿದೆ. ಜಮೀನು ಮಾರಾಟ ಮಾಡಿ ಮನೆಯ ಲಾಕರ್ ನಲ್ಲಿಟ್ಟಿದ್ದ 90 ಲಕ್ಷ ರೂಪಾಯಿ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿ ಭಿಲ್ವಾರ ಕೊತ್ವಾಲಿ ಪೊಲೀಸರು ಮೊಮ್ಮಗಳು ಪೂಜಾ ಚೌಧರಿ ಸೇರಿದಂತೆ ನಾಲ್ವರನ್ನು ಬಂಧಿಸಿದ್ದು, 82 ಲಕ್ಷ ರೂ. ಹಾಗೂ ಕಾರನ್ನು ವಶಪಡಿಸಿಕೊಂಡಿದ್ದಾರೆ.

ರಾಜಸ್ಥಾನದ ಭಿಲ್ವಾಡ ಜಿಲ್ಲೆಯಲ್ಲಿ ಈ ಕಳ್ಳತನದ ಪ್ರಕರಣ ಬೆಳಕಿಗೆ ಬಂದಿದೆ. ಈ ಪ್ರಕರಣ ಬೇಧಿಸಿದ ಪೊಲೀಸರು ನಿಜಕ್ಕೂ ಬೆಚ್ಚಿ ಬಿದ್ದಿದ್ದಾರೆ. ಯಾಕಂದ್ರೆ ಅಜ್ಜನ ಮನೆಯಲ್ಲಿ 90 ಲಕ್ಷ ರೂಪಾಯಿ ಕದ್ದಿದ್ದು ಬೇರೆ ಯಾರು ಅಲ್ಲ. ಆ ವ್ಯಕ್ತಿಯ ಮೊಮ್ಮಗಳೇ ಖತರ್ನಾಕ್ ಪ್ಲಾನ್ ಮಾಡಿ ಎಸ್ಕೇಪ್ ಆಗಿದ್ದಳು.

ಅಜ್ಜನ ತಿಜೋರಿಯಲ್ಲಿದ್ದ ಹಣ ಮಾಯ!
ಬಕ್ಸೂ ಜಾಟ್ ಎಂಬುವರಿಗೆ ಜಮೀನು ಮಾರಾಟ ಮಾಡಿ 90 ಲಕ್ಷ ರೂಪಾಯಿ ಆದಾಯ ಬಂದಿತ್ತು. ಇದೇ ಸಂದರ್ಭದಲ್ಲಿ ಅಜ್ಜನ ಮನೆಗೆ ಮೊಮ್ಮಗಳು ಪೂಜಾ ಚೌಧರಿ ಬಂದಿದ್ದಾಳೆ. ಅಜ್ಜನ ಮನೆಯಲ್ಲಿ 90 ಲಕ್ಷ ರೂಪಾಯಿ ಇರುವಾಗ ಪೂಜಾ ತನ್ನ ಸ್ನೇಹಿತರ ಸಹಾಯದಿಂದ ಹಣ ಕದ್ದು ಪರಾರಿಯಾಗಿದ್ದಳು.

90 ಲಕ್ಷದಲ್ಲಿ 1 ಲಕ್ಷ ದೇವರ ಹುಂಡಿಗೆ
ಮನೆಯಲ್ಲಿ ಅಜ್ಜ ಮಲಗಿದ್ದಾಗ ತಿಜೋರಿ ಕೀ ತೆಗೆದುಕೊಂಡ ಮೊಮ್ಮಗಳು ಬರೋಬ್ಬರಿ 90 ಲಕ್ಷ ರೂಪಾಯಿಯನ್ನು ಕದ್ದಿದ್ದಾಳೆ. ಕದ್ದ 90 ಲಕ್ಷದಲ್ಲಿ 1 ಲಕ್ಷ ರೂಪಾಯಿಯನ್ನು ಖಾಟೂ ಶ್ಯಾಮ ದೇವಸ್ಥಾನದ ಹುಂಡಿಗೆ ಹಾಕಿದ್ದಾಳೆ. ಒಂದೂವರೆ ಲಕ್ಷ ರೂಪಾಯಿಗೆ ಹಳೆಯ ಕಾರನ್ನು ಖರೀದಿಸಿ ಕುಲು ಮನಾಲಿ ಪ್ರವಾಸವನ್ನೂ ಕೈಗೊಂಡಿದ್ದಾರೆ.

90 ಲಕ್ಷ ರೂಪಾಯಿ ಕಳೆದುಕೊಂಡ ಅಜ್ಜ ಬಕ್ಸೂ ಜಾಟ್‌ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಪೊಲೀಸರಿಗೆ ನಾಪತ್ತೆಯಾಗಿದ್ದ ಮೊಮ್ಮಗಳ ಮೇಲೆ ಅನುಮಾನ ಬಂದು ಹುಡುಕಿದಾಗ ಸತ್ಯ ಹೊರ ಬಿದ್ದಿದೆ. ಆರೋಪಿಗಳ ವಿಚಾರಣೆ ನಡೆಸಿದಾಗ ಪೂಜಾ ಅಸಲಿ ಪೂರಾಣ ಬಯಲಾಗಿದ್ದು, ಮೊಮ್ಮಗಳ ಬಳಿ ಉಳಿದಿದ್ದ 82 ಲಕ್ಷ ರೂಪಾಯಿ ನಗದನ್ನು ಅಜ್ಜನಿಗೆ ವಾಪಸ್ ಕೊಡಿಸಿದ್ದಾರೆ.

Related Articles

Latest Articles