ಲೋಕಸಭೆ ಚುನಾವಣೆ ಚುನಾವಣೆ ಘೋಷಣೆ ಆಗಿದ್ದು, ರಾಜ್ಯದಲ್ಲಿ ಅಕ್ರಮ ಹಣ ಸಾಗಾಟ ಹೆಚ್ಚಾಗಿದೆ. ಅಕ್ರಮ ಹಣ ಸಾಗಾಟ ಪತ್ತೆಗೆ ಪೊಲೀಸರು ಕಾರ್ಯಾಚರಣೆಯನ್ನೂ ನಡೆಸುತ್ತಿದ್ದಾರೆ. ಹಲವೆಡೆ, ಕಂತೆ ಕಂತೆ ನಗದು ಪತ್ತೆಯಾಗಿದ್ದರೆ, ರಾಮನಗರದಲ್ಲಿ ಗರಿ ಗರಿ ನೋಟಿನ ಜೊತೆ ರಾಶಿರಾಶಿ ಸೀರೆಗಳು ಸಿಕ್ಕಿವೆ.
ರಾಮನಗರದ ದ್ಯಾವರಸೇಗೌಡನ ದೊಡ್ಡಿಯಲ್ಲಿರುವ ಖಾಸಗಿ ಗೋದಾಮಿನಲ್ಲಿ ರಾಶಿರಾಶಿ ಸೀರೆಗಳು ಪತ್ತೆಯಾಗಿವೆ. ಬರೋಬ್ಬರಿ 10 ಸಾವಿರಕ್ಕೂ ಹೆಚ್ಚು ಸೀರೆಗಳು ಪತ್ತೆಯಾಗಿವೆ.
ಇನ್ನು ಮತದಾರರಿಗೆ ಹಂಚಲು ಸೀರೆಗಳನ್ನು ಸಂಗ್ರಹಿಸಿದ್ದ ಆರೋಪ ಕೇಳಿ ಬಂದಿದೆ. ಜೆಡಿಎಸ್ ಕಾರ್ಯಕರ್ಯರು ದಾಳಿ ಮಾಡಿದ್ದು, ಕಾಂಗ್ರೆಸ್ನವರು ಸೀರೆಗಳನ್ನು ತರಿಸಿದ್ದಾರೆಂದು ಆರೋಪ ಮಾಡಿದ್ದಾರೆ. ಸ್ಥಳಕ್ಕೆ ಡಿವೈಎಸ್ಪಿ ದಿನಕರ್ ಶೆಟ್ಟಿ ಭೇಟಿ, ಪರಿಶೀಲನೆ ನಡೆಸಿದ್ದಾರೆ.
ಈ ಬಗ್ಗೆ ರಾಮನಗರ ಜಿಲ್ಲಾಧಿಕಾರಿ ಡಾ.ಅವಿನಾಶ್ ಮೆನನ್ ರಾಜೇಂದ್ರನ್ ಹೇಳಿಕೆ ನೀಡಿದ್ದು, ಚುನಾವಣೆಗಾಗಿ ಸಂಗ್ರಹಿಸಿಟ್ಟಿದ್ದರಾ ಎಂಬ ಬಗ್ಗೆ ತನಿಖೆ ನಡೆಸುತ್ತೇವೆ. VRL ಗೋದಾಮಿನಲ್ಲಿ ಪತ್ತೆಯಾದ ಸೀರೆಗಳು ಯಾರಿಗೆ ಸೇರಿದ್ದು ಎಂಬುದು ಗೊತ್ತಾಗಿಲ್ಲ. ಸೀರೆಗಳ ಬಿಲ್ ಹಾಗೂ ಸೀರೆಗಳ ಪ್ರಮಾಣಕ್ಕೆ ಅದು ಹೊಂದಾಣಿಕೆ ಆಗುತ್ತಿಲ್ಲ. ಸೀರೆಗಳ ಬಗ್ಗೆ ಲೆಕ್ಕ ಮಾಡಿ ನಾವು ಕೇಸ್ ರಿಜಿಸ್ಟರ್ ಮಾಡುತ್ತೇವೆ ಎಂದಿದ್ದಾರೆ.
ಜಿದ್ದಾಜಿದ್ದಿನ ಕದನದ ಕಣವಾಗಿರೋ ಬೆಂಗಳೂರು ಗ್ರಾಮಾಂತರ ಕ್ಷೇತ್ರದಲ್ಲಿ ಡಿ.ಕೆ.ಬ್ರದರ್ಸ್ನ ಮಣಿಸಲು ಬಿಜೆಪಿ-ಜೆಡಿಎಸ್ ರಣತಂತ್ರ ರೂಪಿಸುತ್ತಿವೆ. ಇದರ ನಡುವೆ ಕಾಂಗ್ರೆಸ್ ಅಭ್ಯರ್ಥಿ ಡಿ.ಕೆ ಸುರೇಶ್ರನ್ನು ಗೆಲ್ಲಿಸಿಕೊಳ್ಳಲು ಅಡ್ಡದಾರಿ ತುಳಿದು ಮಹಿಳಾ ಮಣಿಗಳ ಮನ ಸೆಳೆಯೋದಕ್ಕೆ ಗಿಫ್ಟ್ಗಳು ರೆಡಿ ಮಾಡಿದ್ದಾರೆ ಎಂಬ ಆರೋಪ ಕೇಳಿ ಬಂದಿವೆ.