9 ವರ್ಷದ ಬಾಲಕನನ್ನು ಅತ್ಯಾಚಾರಗೈದು ಕೊಂದ ಘಟನೆ ಉತ್ತರ ಪ್ರದೇದದಿಂದ ವರದಿಯಾಗಿದೆ. ಫತೇಪುರ್ ಜಿಲ್ಲೆಯ ಸೌರಾ ಗ್ರಾಮದ ಮದರಸಾವೊಂದರಲ್ಲಿ ಈ ಘಟನೆ ನಡೆದಿದೆ. ಪ್ರಕರಣಕ್ಕೆ ಸಂಬಂಧಿಸಿ ಆರೋಪಿ ಮದರಸಾ ಶಿಕ್ಷಕನನ್ನು ಪೊಲೀಸರು ಬಂಧಿಸಿದ್ದಾರೆ. ಹಫೀಜ್ ದಿಲ್ನವಾಜ್ ಬಂಧಿತ ಶಿಕ್ಷಕ.
ಪ್ರಕರಣದ ವಿವರ:
ಇತರ ಮಕ್ಕಳು ಆಟವಾಡಲು ಹೊರಗೆ ಹೋಗಿದ್ದಾಗ, 9 ವರ್ಷದ ಬಾಲಕನೊಬ್ಬ ಮೆಟ್ಟಿಲುಗಳ ಮೂಲಕ ಬೇರೆ ರೂಂಗೆ ಹೋಗಿದ್ದನ್ನು ಶಿಕ್ಷಕ ಗಮನಿಸಿದ್ದಾನೆ. ಕೂಡಲೇ ಅಲ್ಲಿಗೆ ತೆರಳಿ ಬಾಲಕ ಕಿರುಚುವುದನ್ನು ತಡೆಯಲು ಬಾಯಿ ಮುಚ್ಚಿ, ಅತ್ಯಾಚಾರಗೈದು ಉಸಿರುಗಟ್ಟಿಸಿ ಕೊಂದಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಬಾಯಿ ಮುಚ್ಚಿಸಿದ ವೇಳೆ ಆ ಹುಡುಗ ಮೂರ್ಛೆ ಹೋಗಿದ್ದಾನೆ. ಹಫೀಜ್ ದಿಲ್ನವಾಜ್ ನಂತರ ಹುಡುಗನ ಕೈ ಕಾಲುಗಳನ್ನು ಕಟ್ಟಿ, ಬಾಯಿಗೆ ಟೇಪ್ ಹಾಕಿ ಅತ್ಯಾಚಾರ ಮಾಡಿದ್ದಾಗಿ ಪೊಲೀಸರ ಮುಂದೆ ಬಾಯಿಬಿಟ್ಟಿದ್ದಾನೆ. ಈ ವೇಳೆ ಉಸಿರಾಡಲಾಗದೆ ಆ ಬಾಲಕ ಮೃತಪಟ್ಟಿದ್ದಾನೆ.
ಇದಾದ ಬಳಿಕ ಆತ್ಯಾಚಾರಿ ಹಫೀಜ್ ದಿಲ್ನವಾಜ್ ತನ್ನ ಸೋದರ ಮಾವ ಮೌಲ್ವಿ ರಖಿಯುದ್ದೀನ್ಗೆ ತಾನು ಮಾಡಿದ ಕೃತ್ಯವನ್ನು ತಿಳಿಸಿದ್ದಾನೆ. ಇಬ್ಬರೂ ಒಟ್ಟಾಗಿ ಶವವನ್ನು ಬಾವಿಗೆ ಹಾಕಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಬಾಲಕನ ಮೇಲೆ ಅತ್ಯಾಚಾರ ಮತ್ತು ಕೊಲೆ ಎರಡನ್ನೂ ಮಾಡಿರುವುದಾಗಿ ಹಫೀಜ್ ದಿಲ್ನವಾಜ್ ಒಪ್ಪಿಕೊಂಡಿದ್ದಾನೆ ಎಂದು ಮಾಲ್ವಾನ್ ಪೊಲೀಸ್ ಠಾಣೆಯ ಹಿರಿಯ ಸಬ್ ಇನ್ಸ್‌ಪೆಕ್ಟರ್ ಉಮೇಶ್ ಚಂದ್ರ ಹೇಳಿದ್ದಾರೆ.
ಮರುದಿನ ಅವರ ಕುಟುಂಬ ಮತ್ತು ಇತರ ಗ್ರಾಮಸ್ಥರ ನೇತೃತ್ವದಲ್ಲಿ ಶೋಧ ತಂಡವು ತಪಾಸಣೆ ನಡೆಸಿದಾಗ ಸಿಮೆಂಟ್ ಸಂಗ್ರಹಿಸಲು ಬಳಸಿದ ಚೀಲದಲ್ಲಿ ಶವ ಪತ್ತೆಯಾಗಿದೆ. ಜುಲೈ 3ರಂದು ಇಬ್ಬರನ್ನು ಬಂಧಿಸಲಾಗಿತ್ತು. ಆ ಬಾಲಕನನ್ನು ಅತ್ಯಾಚಾರ ಮಾಡಿ ಕೊಂದಿರುವುದಾಗಿ ದಿಲ್ನವಾಜ್ ಒಪ್ಪಿಕೊಂಡಿದ್ದಾನೆ. 9 ವರ್ಷದ ಬಾಲಕನ ಮೇಲೆ ಅತ್ಯಾಚಾರ ಮಾಡಲು ತಾನು ನೋಡುತ್ತಿದ್ದ ವೀಡಿಯೋಗಳು ಪ್ರೇರೇಪಿಸಿತು ಎಂದು ಅವರು ಪೊಲೀಸರಿಗೆ ತಿಳಿಸಿದ್ದಾರೆ.