ಉಡುಪಿ: ರೈಲಿನಲ್ಲಿ ಯುವತಿಯ ಮಾನಭಂಗಕ್ಕೆ ಯತ್ನ ನಡೆದಿದ್ದು ಮಾಹಿತಿ ಪಡೆದ 24 ಗಂಟೆಯಲ್ಲೇ ಮಣಿಪಾಲ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ. ಭಟ್ಕಳ ಮೂಲದ ಮೊಹಮ್ಮದ್ ಶುರೈಮ್ (22) ಬಂಧಿತ ಆರೋಪಿ. ಭಾನುವಾರ ಬೆಳಗ್ಗೆ ರೈಲಿನಲ್ಲಿ ಯುವತಿ ಬರುತ್ತಿದ್ದ ವೇಳೆ ಘಟನೆ ನಡೆದಿದೆ.
ಮಣಿಪಾಲದ ಯುವತಿ ಬೆಂಗಳೂರಿನ ಐಟಿ ಕಂಪನಿಯಲ್ಲಿ ಉದ್ಯೋಗ ಮಾಡುತ್ತಿದ್ದಾರೆ. ಜನ್ಮಾಷ್ಟಮಿ ಹಿನ್ನೆಲೆ ಶನಿವಾರ ರಾತ್ರಿ ಉಡುಪಿಗೆ ಹೊರಟಿದ್ದರು. ಭಾನುವಾರ ಮುಂಜಾನೆ ರೈಲು ಸಂಚರಿಸುತ್ತಿದ್ದಾಗಲೇ ವ್ಯಕ್ತಿ ಅಸಭ್ಯ ವರ್ತನೆ ತೋರಿದ್ದಾನೆ.
ಇನ್ನೇನು ಉಡುಪಿ ಬರಲು ಅರ್ಧ ಗಂಟೆ ಇರುವಾಗ ಮಾನಭಂಗಕ್ಕೆ ಯತ್ನಿಸಿದ್ದಾನೆ. ಕೂಡಲೇ ಆಕ್ಷೇಪ ವ್ಯಕ್ತಪಡಿಸಿದ್ದರಿಂದ ಆರೋಪಿ ಕ್ಷಮೆಯಾಚಿಸಿದ್ದಾನೆ. ಘಟನೆ ಕುರಿತು ಉಡುಪಿ ರೈಲ್ವೆ ಪೊಲೀಸ್ಗೆ ಯುವತಿ ಮಾಹಿತಿ ನೀಡಿದ್ದಾರೆ. ರೈಲ್ವೆ ಮದತ್ ಆ್ಯಪ್ ಮೂಲಕವೂ ದೂರು ನೀಡಿದ್ದಾರೆ. ಯುವತಿ ನೀಡಿದ ಮಾಹಿತಿ ಆಧರಿಸಿ ಮಣಿಪಾಲ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.