ಪ್ಯಾರಿಸ್ ಪ್ಯಾರಾಲಿಂಪಿಕ್ಸ್‌ನಲ್ಲಿ ಶುಕ್ರವಾರದಂದು ಭಾರತ ಅಮೋಘ ಸಾಧನೆ ತೋರಿದೆ. ನಮ್ಮ ನಾಡಿನ ನಾರಿಯರು ಶಕ್ತಿ ಮೆರೆದಿದ್ದಾರೆ. ಮೂವರು ಪದಕ ಗೆದ್ದು ಭಾರತಕ್ಕೆ ಕೀರ್ತೀ ತಂದಿದ್ದಾರೆ. ಅವನೀ ಲೇಖರ, ಮೋನಾ ಅಗರ್ವಾಲ್, ಪ್ರೀತಿ ಪಾಲ್ ಪದಕ ಗೆದ್ದು ಬೀಗಿದ್ದಾರೆ. ಆ ಮೂಲಕ ಭಾರತ ಮೂರು ಪದಕ ಗೆದ್ದ ಸಂಭ್ರಮದಲ್ಲಿದೆ.

ಮಹಿಳೆಯರ 10 ಮೀಟರ್ ಏರ್ ರೈಫಲ್ (SH1) ವಿಭಾಗದಲ್ಲಿ ಅವನಿ ಲೇಖರಾ ಇತಿಹಾಸ ಸೃಷ್ಟಿಸಿದ್ದು, 249.7 ಅಂಕ ಗಳಿಸುವ ಮೂಲಕ ಚಿನ್ನದ ಪದಕಕ್ಕೆ ಮುತ್ತಿಟ್ಟಿದ್ದಾರೆ. ಇದಲ್ಲದೆ ಟೋಕಿಯೋ ಒಲಿಂಪಿಕ್ಸ್ನಲ್ಲಿ ನಿರ್ಮಿಸಿದ್ದ ತಮ್ಮದೇ ದಾಖಲೆಯನ್ನು ಅವನಿ ಮುರಿದಿದ್ದಾರೆ. ವಾಸ್ತವವಾಗಿ ಟೋಕಿಯೋ ಒಲಿಂಪಿಕ್ಸ್ನಲ್ಲಿ ಅವನಿ ಒಟ್ಟಾರೆಯಾಗಿ 249.6 ಅಂಕ ಕಲೆಹಾಕಿ ಚಿನ್ನದ ಪದಕ ಗೆದ್ದಿದ್ದರು.

ಇದೀಗ ಪ್ಯಾರಿಸ್ನಲ್ಲಿ 249.7 ಅಂಕ ಗಳಿಸುವ ಮೂಲಕ ಚಿನ್ನ ಗೆದ್ದಿರುವ ಅವನಿ ತಮ್ಮದೇ ಹಳೆಯ ದಾಖಲೆಯನ್ನು ಪುಡಿಗಟ್ಟಿದ್ದಾರೆ. ಇದಲ್ಲದೆ ಪ್ಯಾರಾಲಿಂಪಿಕ್ಸ್‌ನಲ್ಲಿ ಸತತ ಎರಡನೇ ಬಾರಿಗೆ ಚಿನ್ನದ ಪದಕ ಗೆದ್ದ ಸಾಧನೆಯನ್ನು ಅವನಿ ಮಾಡಿದ್ದಾರೆ. ಇನ್ನು ಇದೇ ಸ್ಪರ್ಧೆಯಲ್ಲಿ ಭಾರತದ ಮತ್ತೋರ್ವ ಪ್ಯಾರಾ ಶೂಟರ್ ಮೋನಾ ಅಗರ್ವಾಲ್ 228.7 ಅಂಕ ಗಳಿಸಿ ಕಂಚಿನ ಪದಕ ಗೆಲ್ಲುವಲ್ಲಿ ಯಶಸ್ವಿಯಾಗಿದ್ದಾರೆ.

ಮೂರನೇ ಪದಕದ ರೂಪದಲ್ಲಿ 100 ಮೀಟರ್ ಓಟದ ಸ್ಪರ್ಧೆಯಲ್ಲಿ ಭಾರತದ ಪ್ರೀತಿ ಪಾಲ್ ಕಂಚಿನ ಪದಕ ಗೆದ್ದಿದ್ದಾರೆ. ಮಹಿಳೆಯರ 100 ಮೀಟರ್ ಟಿ-35 ಫೈನಲ್‌ನಲ್ಲಿ ಮೂರನೇ ಸ್ಥಾನ ಪಡೆಯುವ ಮೂಲಕ ಪ್ರೀತಿ ಕಂಚಿನ ಪದಕವನ್ನು ತನ್ನದಾಗಿಸಿಕೊಂಡರು. ಇದರೊಂದಿಗೆ ಪ್ಯಾರಾಲಿಂಪಿಕ್ ಕ್ರೀಡಾಕೂಟದಲ್ಲಿ ಟ್ರ್ಯಾಕ್ ಸ್ಪರ್ಧೆಯಲ್ಲಿ ಪದಕ ಗೆದ್ದ ಮೊದಲ ಭಾರತೀಯ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.