Wednesday, December 11, 2024

ಉಡುಪಿ: 16ನೇ ಶತಮಾನದ ಶಾಸನ ಸಹಿತ ವೀರಗಲ್ಲು ಪತ್ತೆ..! ವಿಶೇಷತೆಯೇನು ಗೊತ್ತಾ?

ಉಡುಪಿ: ಕುಂದಾಪುರ ತಾಲೂಕಿನ ಉಳ್ತೂರು ಕಟ್ಟೆಮನೆಯ ಬೊಬ್ಬರ್ಯ ದೈವಸ್ಥಾನದ ಹಾಡಿಯಲ್ಲಿ ಶಾಸನ ಸಹಿತ ವೀರಗಲ್ಲು ಪತ್ತೆಯಾಗಿದೆ. ಮುಲ್ಕಿ ಸುಂದರ್ ರಾಮ್ ಶೆಟ್ಟಿ ಕಾಲೇಜಿನ ನಿವೃತ್ತ ಪ್ರಾಧ್ಯಾಪಕ ಪ್ರೊ. ಟಿ.ಮುರುಗೇಶಿಯವರ ತಂಡ ಶಾಸನವನ್ನು ಉತ್ಖನನ ನಡೆಸಿದೆ. ಶಾಸನವನ್ನು ಒಂದು ಆಯತಾಕಾರದ ಶಿಲೆಯ ಮೇಲೆ ಚಿತ್ರಪಟ್ಟಿಕೆ ಸಹಿತವಾಗಿ ಚಿತ್ರಿಸಲಾಗಿದೆ. ಶಾಸನವನ್ನು ಕನ್ನಡ ಭಾಷೆ ಮತ್ತು ಲಿಪಿಯಲ್ಲಿ ಬರೆಯಲಾಗಿದೆ. ಶಾಸನದ ಲಿಪಿ ಲಕ್ಷಣದ ಆಧಾರದ ಮೇಲೆ 15-16 ನೇ ಶತಮಾನದ ಶಾಸನವೆಂದು ನಿರ್ಧರಿಸಬಹುದಾಗಿದೆ.

ಹೇಗಿದೆ ಶಾಸನ?
“ಶಾಸನ ಶ್ರೀ ಗಣಾಧಿಪತಯೇ ನಮಃ” ಎಂದು ಆರಂಭವಾಗಿದ್ದು, ಪ್ರಜೋತ್ಪತ್ತಿ ಸಂವತ್ಸರದ ಶು ೧೦ ಲೂ ಲವಮಾಳುವನ ವಾಳೆಯ (ಹೆಸರು ನಷ್ಟವಾಗಿದೆ) ಹತನಾದ, ಮೃತ ವಾಳೆಯನ ನೆನಪಿಗೆ ಯಾರೋ (ಹೆಸರು ನಷ್ಟವಾಗಿದೆ) ಈ ವೀರಗಲ್ಲನ್ನು ಹಾಕಿಸಿದರು, ಶಾಸನ ಶುಭಮಸ್ತು ಎಂದು ಕೊನೆಯಾಗಿದೆ.

ಶಾಸನದ ಚಿತ್ರಪಟ್ಟಿಕೆಯ ಮಧ್ಯಭಾಗದಲ್ಲಿ ಒಬ್ಬ ವೀರ ವೀರಭಂಗಿಯಲ್ಲಿ, ತನ್ನ ಬಲಗೈಯಲ್ಲಿ ಖಡ್ಗವನ್ನು ಎತ್ತಿಹಿಡಿದಿದ್ದು, ಎಡಗೈಯಲ್ಲಿ ಗುರಾಣಿಯನ್ನು ಹಿಡಿದು ನಿಂತಿರುವಂತೆ ಪ್ರಧಾನವಾಗಿ ಚಿತ್ರಿಸಲಾಗಿದೆ. ವೀರನ ಎಡಭಾಗದಲ್ಲಿ ಛತ್ರವನ್ನು ಹಿಡಿದು ನಿಂತಿರುವ ವ್ಯಕ್ತಿಯೊಬ್ಬನ ಶಿಲ್ಪವಿದೆ. ಬಲಭಾಗದಲ್ಲಿ ನಿಂತಿರುವ ವ್ಯಕ್ತಿ ತನ್ನ ಎಡಗೈಯ ಕತ್ತಿಯಿಂದ ತನ್ನ ಹೊಟ್ಟೆಯನ್ನು ಇರಿದುಕೊಂಡಿದ್ದು, ಬಲಗೈಯಲ್ಲಿ ಗುರಾಣಿಯಿದೆ.

ಈ ಶಿಲ್ಪಗಳ ಮೇಲ್ಭಾಗದಲ್ಲಿ ಚಂದ್ರ ಮತ್ತು ಸೂರ್ಯರ ಉಬ್ಬು ಶಿಲ್ಪಗಳಿವೆ. ಚಿತ್ರಪಟ್ಟಿಕೆ ಒಂದು ನಿರೂಪಣಾತ್ಮಕ ಶಿಲ್ಪವಾಗಿದ್ದು, ಚರಿತ್ರೆಯ ಘಟನಾವಳಿಯೊಂದನ್ನು ಸುಂದರವಾಗಿ ನಿರೂಪಿಸಿದೆ.

Related Articles

Latest Articles