ಟಿ20 ವಿಶ್ವಕಪ್ ಮುಕ್ತಾಯಕ್ಕೆ ಇನ್ನು ಕೇವಲ 3 ಪಂದ್ಯಗಳು ಮಾತ್ರ ಬಾಕಿ ಉಳಿದಿವೆ. ಈ ಮೂರು ಪಂದ್ಯಗಳಲ್ಲಿ ಎರಡು ಸೆಮಿಫೈನಲ್ ಪಂದ್ಯಗಳು ನಾಳೆ ಅಂದರೆ ಜೂನ್ 27 ರಂದು ನಡೆಯಲಿವೆ. ಮೊದಲ ಸೆಮಿಫೈನಲ್ ಪಂದ್ಯ ದಕ್ಷಿಣ ಆಫ್ರಿಕಾ ಮತ್ತು ಅಫ್ಘಾನಿಸ್ತಾನ ನಡುವೆ ನಡೆಯಲಿದ್ದು, ಎರಡನೇ ಸೆಮಿಫೈನಲ್‌ನಲ್ಲಿ ಭಾರತ ಮತ್ತು ಇಂಗ್ಲೆಂಡ್ ಮುಖಾಮುಖಿಯಾಗಲಿವೆ.
ವೆಸ್ಟ್ ಇಂಡೀಸ್‌ನಲ್ಲಿ ನಡೆದ ಸೂಪರ್ 8 ಸುತ್ತಿನ ಹಲವು ಪಂದ್ಯಗಳಿಗೆ ಮಳೆ ಹಾಜರಿ ಹಾಕಿತ್ತು. ಹಾಗಾಗಿ ಸೆಮಿಫೈನಲ್ ಪಂದ್ಯಕ್ಕೂ ಮಳೆಯ ಅವಕೃಪೆ ಎದುರಾಗುವ ಸಾಧ್ಯತೆಗಳಿವೆ. ಒಂದು ವೇಳೆ ಈ ಎರಡೂ ಸೆಮಿಫೈನಲ್ ಪಂದ್ಯಗಳು ಮಳೆಯಿಂದಾಗಿ ರದ್ದಾದರೆ ಯಾವ ತಂಡಗಳಿಗೆ ಲಾಭ? ಯಾವ ತಂಡಗಳು ಫೈನಲ್‌ಗೆ ಹೋಗುತ್ತವೆ ಎಂಬ ಪ್ರಶ್ನೆ ಅಭಿಮಾನಿಗಳ ಮನದಲ್ಲಿ ಮೂಡಿದೆ.
ಐಸಿಸಿ ನಿಯಮಗಳ ಪ್ರಕಾರ ಸೆಮಿಫೈನಲ್ ಪಂದ್ಯದ ವೇಳೆ ಮಳೆ ಸುರಿದು ಪಂದ್ಯ ರದ್ದಾದರೆ ಅದರ ಗುಂಪಿನಲ್ಲಿ ಅಗ್ರಸ್ಥಾನದಲ್ಲಿರುವ ತಂಡ ಫೈನಲ್‌ಗೆ ಲಗ್ಗೆ ಇಡಲಿದೆ.
ವಿಶ್ವಕಪ್‌ನ ಮೊದಲ ಸೆಮಿಫೈನಲ್ ಪಂದ್ಯ ದಕ್ಷಿಣ ಆಫ್ರಿಕಾ ಮತ್ತು ಅಫ್ಘಾನಿಸ್ತಾನ ನಡುವೆ ಟ್ರಿನಿಡಾಡ್‌ನ ಬ್ರಿಯಾನ್ ಲಾರಾ ಸ್ಟೇಡಿಯಂನಲ್ಲಿ ಭಾರತೀಯ ಕಾಲಮಾನ ಬೆಳಿಗ್ಗೆ 6 ಗಂಟೆಗೆ ನಡೆಯಲಿದೆ. ಸದ್ಯ ಗುಂಪು-2ರಲ್ಲಿ ದಕ್ಷಿಣ ಆಫ್ರಿಕಾ ಮೊದಲ ಸ್ಥಾನದಲ್ಲಿದ್ದು, ಅಫ್ಘಾನಿಸ್ತಾನ ಎರಡನೇ ಸ್ಥಾನದಲ್ಲಿದೆ. ರದ್ದಾದರೆ ದಕ್ಷಿಣ ಆಫ್ರಿಕಾ ಫೈನಲ್‌ಗೆ ಪ್ರವೇಶ ಪಡೆಯುತ್ತದೆ.
ಇದೇ ಪರಿಸ್ಥಿತಿ ಭಾರತ ಮತ್ತು ಇಂಗ್ಲೆಂಡ್ ನಡುವಿನ ಪಂದ್ಯಕ್ಕೂ ಅನ್ವಯಿಸುತ್ತದೆ. ಈ ಎರಡೂ ತಂಡಗಳ ನಡುವಿನ ಹೈವೋಲ್ಟೇಜ್ ಪಂದ್ಯಕ್ಕೆ ಗಯಾನಾದ ಪ್ರಾವಿಡೆನ್ಸ್ ಕ್ರೀಡಾಂಗಣ ಆತಿಥ್ಯವಹಿಸುತ್ತಿದೆ. ಒಂದು ವೇಳೆ ಮಳೆಯಿಂದಾಗಿ ಈ ಪಂದ್ಯ ರದ್ದಾದರೆ, ಟೀಂ ಇಂಡಿಯಾ ನೇರವಾಗಿ ಫೈನಲ್‌ಗೆ ಪ್ರವೇಶಿಸಲಿದ್ದು, ಇಂಗ್ಲೆಂಡ್ ತಂಡ ವಿಶ್ವಕಪ್‌ನಿಂದ ಹೊರಬೀಳಲಿದೆ.