ಕಳೆದ ಹಲವು ದಿನಗಳಿಂದ ದಕ್ಷಿಣ ಕನ್ನಡ ಹಾಗೂ ಕೊಡಗು ಗಡಿ ಭಾಗದ ಕೂಜಿಮಲೆ ಪ್ರದೇಶದಲ್ಲಿ ನಕ್ಸಲರ ಸಂಚಾರ ಇದೆಯೆಂಬ ಸುದ್ದಿ ಕೇಳಿಬಂದಿತ್ತು. ಕೂಜಿಮಲೆ ಎಸ್ಟೇಟ್ ಪ್ರದೇಶದಲ್ಲಿ ಕಂಡು ಬಂದ ನಕ್ಸಲ್ ಮಹಿಳೆ ಎಂಬ ವದಂತಿಗೆ ಕಾರಣವಾಗಿದ್ದ ಅಪರಿಚಿತ ಮಹಿಳೆಯನ್ನು ನಕ್ಸಲ್ ನಿಗ್ರಹ ಪಡೆ ಕ್ಯೂಬಿಂಗ್ ವೇಳೆ ವಶಕ್ಕೆ ಪಡೆದಿದ್ದಾರೆ.
ಅಪರಿಚಿತ ಮಹಿಳೆಯನ್ನು ಎಎನ್.ಎಫ್. ಅಧಿಕಾರಿಗಳು ಪತ್ತೆ ಮಾಡಿ, ವಶಕ್ಕೆ ಪಡೆದು ವಿಚಾರಿಸಿದಾಗ, ಈ ಶಂಕಿತ ಮಹಿಳೆ ಮಾನಸಿಕ ಅಸ್ವಸ್ಥೆ ಎಂದು ದೃಢಪಟ್ಟಿರುವುದಾಗಿ ತಿಳಿದುಬಂದಿದೆ.
ಅಪರಿಚಿತರು ಐನೆಕಿದು ಗ್ರಾಮದ ತೋಟದಮಜಲು ಮನೆಗೆ ಬಂದಿದ್ದು, ಬುಧವಾರ ಈ ಅಪರಿಚಿತ ಮಹಿಳೆ ಕೂಜಿಮಲೆ ಎಸ್ಟೇಟ್ ನ ರಬ್ಬರ್ ತೋಟದಲ್ಲಿ ಒಬ್ಬಳೇ ನಡೆದುಕೊಂಡು ಹೋಗುತ್ತಿದ್ದುದನ್ನು ಕೆಲ ಸಿಬ್ಬಂದಿ ನೋಡಿದ್ದರು. ಬಳಿಕ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದರು. ನಂತರ ಎಎನ್ ಎಫ್ ಶೋಧ ಕಾರ್ಯ ಪ್ರಾರಂಭಿಸಿತ್ತು. ಇದೀಗ ಎಎನ್ ಎಫ್ ಅಧಿಕಾರಿಗಳು ಶಂಕಿತ ಮಹಿಳೆಯನ್ನು ಪತ್ತೆ ಮಾಡಿ ವಶಕ್ಕೆ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ.