ಮಹಿಳೆ ಪಿಜ್ಜಾ ತಿನ್ನುವುದನ್ನು ಗಮನಿಸಿದ ಕಳ್ಳನೊಬ್ಬ ಆಕೆಯ ಸರ ಕಸಿದು ಪರಾರಿಯಾದ ದೃಶ್ಯ ಸಮೇತ ಘಟನೆಯೊಂದು ವೈರಲ್ ಆಗಿದೆ. ಹರಿಯಾಣದ ಪಾಣಿಪತ್ನಲ್ಲಿ ಈ ಘಟನೆ ನಡೆದಿದೆ.
ಮಹಿಳೆ ತನ್ನ ಸ್ನೇಹಿತೆಯರೊಂದಿಗೆ ಮಳಿಗೆಯೊಂದರಲ್ಲಿ ಪಿಜ್ಜಾ ಸೇವಿಸುತ್ತಾ ಮಗ್ನರಾಗಿದ್ದಳು. ಆದರೆ ಈ ವೇಳೆ ಅಲ್ಲಿಗೆ ಬಂದ ಕಳ್ಳ ಹೆಲ್ಮೆಟ್ ಧರಿಸಿ ಅಂಗಡಿ ಒಳಕ್ಕೆ ಬಂದಿದ್ದಾನೆ. ನಂತರ ಪಿಜ್ಜಾ ಆರ್ಡರ್ ಮಾಡಿದ್ದಾನೆ.
ಪಿಜ್ಜಾ ಆರ್ಡರ್ ಮಾಡಿದ ಬಳಿಕ ಆರ್ಡರ್ಗಾಗಿ ಕಾದಂತೆ ನಟಿಸಿದ್ದಾನೆ. ಆದರೆ ಅತ್ತ ಮಹಿಳೆ ಪಿಜ್ಜಾ ತಿನ್ನುತ್ತಿದ್ದನ್ನು ಗಮನಿಸಿದ ಕಳ್ಳ ಆಕೆಯ ಕುತ್ತಿಗೆಯಲ್ಲಿದ್ದ ಚೈನ್ ಕಸಿದು ಪರಾರಿಯಾಗಿದ್ದಾನೆ. ಈ ದೃಶ್ಯ ಮಳಿಗೆಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.
ಜೂ. 8ರ ಮಧ್ಯಾಹ್ನ 3:40ರ ಸುಮಾರಿಗೆ ಕಳ್ಳ ಸರ ಎಗರಿಸಿ ಪರಾರಿಯಾಗಿದ್ದಾನೆ. ಮಾಹಿತಿ ಪ್ರಕಾರ 20 ಗ್ರಾಂ ತೂಕದ ಸರವನ್ನು ಆತ ಕಸಿದುಕೊಂಡು ಹೋಗಿದ್ದಾನೆ. ಸದ್ಯ ಈ ಕುರಿತು ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.