ಕೆಎಸ್‌ಆರ್‌ಟಿಸಿ ಬಸ್‌ನಲ್ಲಿ ಪ್ರಯಾಣಿಸುತ್ತಿದ್ದ ಅಪ್ರಾಪ್ತೆಗೆ ಲೈಂಗಿಕ ಕಿರುಕುಳ ನೀಡಿದ ಆರೋಪ ಕೇಳಿಬಂದಿದೆ. ಇನ್ನು ಇದೇ ವೇಳೆ ಕಿರುಕುಳ ನೀಡಿದ ಆರೋಪಿಯನ್ನು ತರಾಟೆಗೆ ತೆಗೆದುಕೊಂಡಿದ್ದನ್ನು ವಿಡಿಯೋ ಮಾಡಿದ ವ್ಯಕ್ತಿಯನ್ನೂ ಗುಂಪೊಂದು ತರಾಟೆಗೆ ತೆಗೆದುಕೊಂಡ ಘಟನೆ ವರದಿಯಾಗಿದೆ.
ಲೈಂಗಿಕ ಕಿರುಕುಳ ನೀಡಿದ ಆರೋಪಿಯನ್ನು ಪ್ರಯಾಣಿಕರು ತರಾಟೆಗೆ ತೆಗೆದುಕೊಂಡ ಘಟನೆ ಶಿರಾಡಿ ಘಾಟ್‌ನಲ್ಲಿ ಶನಿವಾರ ನಡೆದಿದೆ.
ಬಾಲಕಿಗೆ ಕಿರುಕುಳ ನೀಡಿದವರು ಬೇರೆ ಸಮುದಾಯಕ್ಕೆ ಸೇರಿದವರು ಎಂಬ ಆರೋಪವಿದೆ. ಆರೋಪಿಯನ್ನು ಇತರ ಸಹ ಪ್ರಯಾಣಿಕರು ತರಾಟೆಗೆ ತೆಗೆದುಕೊಂಡಿದ್ದನ್ನು ಪ್ರಯಾಣಿಕರೊಬ್ಬರು ವಿಡಿಯೋ ಮಾಡಿದ್ದಾರೆ.
ಘಟನೆಯ ಆರೋಪಿಯ ಸ್ನೇಹಿತ ಎನ್ನಲಾದ ವ್ಯಕ್ತಿಯೊಬ್ಬ ಹೊರಗಿನವರಿಗೆ ವಿಷಯ ತಿಳಿಸಿದ್ದಾನೆ. ನಂತರ ಗುಂಪೊಂದು ಬಸ್ಸಿನೊಳಗೆ ನುಗ್ಗಿ ಘಟನೆಯ ವಿಡಿಯೋ ಮಾಡಿದ ವ್ಯಕ್ತಿಯೊಂದಿಗೆ ವಾಗ್ವಾದ ನಡೆಸಿದ್ದಾರೆ.
ಉಪ್ಪಿನಂಗಡಿ ಪೊಲೀಸರು ಸ್ಥಳಕ್ಕೆ ಆಗಮಿಸಿ ಘಟನೆಯ ವಿಡಿಯೋ ಮಾಡಿದ ವ್ಯಕ್ತಿಯನ್ನು ಸುರಕ್ಷಿತವಾಗಿ ಆತನ ಮನೆಗೆ ಕರೆದೊಯ್ದಿದ್ದಾರೆ.