ಇದ್ಯಾವ ಭಾವ-ಬಂಧವೋ ಗೊತ್ತಿಲ್ಲ, ಕಿರುತೆರೆಯ ಧಾರಾವಾಹಿಯ ಕಥೆಯೊಂದು ಕಾಸರಗೋಡಿನಲ್ಲಿ ನಿಜ ಬದುಕಿನ ಕಥೆಯಾದ ಅಚ್ಚರಿಯ ಘಟನೆ.
ಬರಹ: ಗಣೇಶ್ ಕಾಸರಗೋಡು
[ಗಣೇಶ್ ಕಾಸರಗೋಡು ಅವರ ಫೇಸ್‌ಬುಕ್ ಖಾತೆಯಿಂದ ಈ ಲೇಖನ ಆರಿಸಿಕೊಳ್ಳಲಾಗಿದೆ.]
ಇದನ್ನು ಜನ್ಮ ಜನ್ಮಾಂತರದ ಕಥೆ ಎನ್ನುವಿರಾ ಅಥವಾ ಭಾವ-ಬಂಧದ ವಾಸ್ತವದ ವಿಸ್ಮಯ ಎನ್ನುವಿರಾ ಅದು ನಿಮಗೆ ಮತ್ತು ನಿಮ್ಮ ನಂಬಿಕೆಗೆ ಬಿಟ್ಟ ವಿಚಾರ. ಯಾವುದಕ್ಕೂ ಮೊದಲು ನಡೆದ, ನಡೆಯುತ್ತಿರುವ, ನಡೆಯ ಬಹುದಾದ ಈ ಕಥಾ ತಿರುಳನ್ನೊಮ್ಮೆ ಗಮನಿಸಿ ಬಿಡಿ. ಅದು ನಡೆದದ್ದು ಹೀಗೆ :
ಮೊನ್ನೆ ರಾತ್ರಿ ಒಂಬತ್ತೂವರೆ ಗಂಟೆಗೆ ‘Zee ಕನ್ನಡ’ದಲ್ಲಿ ಪ್ರಸಾರವಾಗುತ್ತಿರುವ ‘ಸೀತಾರಾಮ’ ಧಾರಾವಾಹಿಯನ್ನು ನೋಡುತ್ತಿದ್ದೆ. ಯಾಕೋ ಈ ಧಾರಾವಾಹಿ ವೈಯಕ್ತಿಕವಾಗಿ ನನಗೆ ತುಂಬಾ ಇಷ್ಟವಾಗಿ ಬಿಟ್ಟಿದೆ. ಅಂದು ನಾನು ಕಾಸರಗೋಡಿನ ನಮ್ಮ ಮನೆಯಲ್ಲಿದ್ದೆ. ಜಗುಲಿ ತುಂಬಾ ಕುಟುಂಬಸ್ಥರು. ಎಲ್ಲರೂ ತದೇಕಚಿತ್ತದಿಂದ ಈ ಧಾರಾವಾಹಿಯನ್ನು ನೋಡುತ್ತಿದ್ದರು. ಕಥಾ ಹಂದರದ ಫ್ಲೋದಲ್ಲಿ ಒಂದಾಗಿ ಬಿಟ್ಟಿದ್ದರು! ಧಾರಾವಾಹಿ ಮುಗಿದಾಕ್ಷಣ ಫೇಸ್ ಬುಕ್’ನಲ್ಲಿ ನಾನೊಂದು ಕಾಮೆಂಟ್ ಅಪ್ಲೋಡ್ ಮಾಡಿದೆ : ‘ಸೀತಾರಾಮ : ನಮ್ಮೆಲ್ಲರ ಮನಸೂರೆಗೊಂಡ ಧಾರಾವಾಹಿ. ಜೀಟಿವಿಗೆ ಧನ್ಯವಾದ’.
ಎರಡೇ ಎರಡು ನಿಮಿಷದಲ್ಲಿ ನನ್ನ ಮೆಸ್ಸೆಂಜರ್’ಗೊಂದು ಕಾಮೆಂಟ್ ಬಂದು ಬಿತ್ತು : ‘ ಇದು ನನ್ನ ಬದುಕನ್ನೇ ಹೋಲುವ ಕಥೆ ಹೊಂದಿರುವ ಧಾರಾವಾಹಿ ಸರ್. ನನ್ನ ಹೆಸರು ಯೋಗಿತಾ ಆಚಾರ್ಯ. ನಾನು ಮೂಲತಃ ಕಾಸರಗೋಡಿನವಳು. ನನ್ನ ಮಗಳು ಸಿರಿ. ಇವಳ ತಂದೆ ಹೃದಯಾಘಾತದಿಂದ ತೀರಿಕೊಂಡರು. ಅದರ ನಂತರ ಸಿರಿಯ ಎಲ್ಲಾ ಕಷ್ಟ ಸುಖಗಳಿಗೆ ಜತೆಯಾದವರು ನನ್ನ ತಾಯಿಯ ಚಿಕ್ಕಪ್ಪನ ಮಗನಾದ ಶಾಮ ಆಚಾರ್ಯ. ಈ ನನ್ನ ಮಗಳ ಕೋರಿಕೆಯಂತೆ ನಾವು ಕಳೆದ ಮಾರ್ಚ್’ನಲ್ಲಿ ವಿವಾಹವಾದೆವು. ಆದರೆ ಕ್ರೂರ ವಿಧಿ ನಮ್ಮ ಸಿರಿಯನ್ನು ನಮ್ಮಿಂದ ದೂರ ಮಾಡಿತು. ಕಳೆದ ಏಪ್ರಿಲ್ 27ರಂದು ಸಿರಿ ನಮ್ಮನ್ನು ಬಿಟ್ಟು ಹೋಗಿದ್ದಾಳೆ. ಹುಟ್ಟಿನಿಂದಲೂ ಹೃದಯ ಸಂಬಂಧಿ ಕಾಯಿಲೆಯಿದ್ದ ಕಾರಣ ದೇವರು ಆರು ವರ್ಷದ ಅವಳನ್ನು ಕರೆಸಿ ಕೊಂಡಿದ್ದಾನೆ…’
ಈ ಮೆಸೇಜನ್ನು ಓದಿ ನಾನು ಗರ ಬಡಿದವನಂತೆ ಕುಳಿತು ಬಿಟ್ಟೆ. ಕ್ಷಣಮಾತ್ರದಲ್ಲಿ ಎಚ್ಚೆತ್ತುಕೊಂಡು ಯೋಗಿತಾ ಆಚಾರ್ಯರಿಗೆ ಮೆಸೇಜ್ ಮಾಡಿದೆ : ‘ನಾನೀಗ ಕಾಸರಗೋಡಿನಲ್ಲಿದ್ದೇನೆ. ಬಿಡುವಿದ್ದರೆ ಮನೆಗೆ ಬನ್ನಿ’.
ತಡ ಮಾಡಲಿಲ್ಲ, ಅವರಿಬ್ಬರೂ ನನ್ನ ಮನೆಗೆ ಬಂದೇ ಬಿಟ್ರು. ಅವರಲ್ಲಿ ಪತ್ನಿಯ ಹೆಸರು ಈ ಹಿಂದೆಯೇ ಹೇಳಿದಂತೆ: ಯೋಗಿತಾ ಆಚಾರ್ಯ, ಇವರ ಪತಿಯ ಹೆಸರು : ಶ್ಯಾಮ. ನನ್ನ ಮುಂದೆ ಕೂತು ಇವರಿಬ್ಬರೂ ಜತೆಯಾಗಿ ತಮ್ಮ ಬದುಕಿನ ಕಥೆಯನ್ನು ಹೇಳುತ್ತಾ ಹೋದರು: ‘ಸರ್, ಈಗ ZeeTVಯಲ್ಲಿ ಪ್ರಸಾರವಾಗುತ್ತಿರುವ ‘ಸೀತಾರಾಮ’ ಧಾರಾವಾಹಿಯ ಕಥೆ ಹೆಚ್ಚುಕಮ್ಮಿ ನಮ್ಮ ಬದುಕಿನ ಕಥೆಯೇ. ಅಂದರೆ, ನನ್ನ ಗಂಡ ಮತ್ತು ಮಗಳ ಕಥೆ! ಹೌದು, ನಮ್ಮದು ಸುಖ ಸಂಸಾರವಾಗಿತ್ತು. ಆರತಿಗೊಬ್ಬಳು ಮಗಳಿದ್ದಳು. ಆಕೆಯ ಹೆಸರು ಸಿರಿ. ಆದರೆ ಹುಟ್ಟಿನಿಂದಲೂ ಹೃದಯದ ಕಾಯಿಲೆ. ನಡುವೆ ಸಿರಿಯ ಅಪ್ಪ ಹಾರ್ಟ್ ಅಟ್ಯಾಕ್’ನಿಂದ ತೀರಿಕೊಂಡು ಬಿಟ್ರು. ಅದರ ನಂತರ ಸಿರಿಗೆ ಅತ್ಯಂತ ಆಪ್ತರಾದವರು ಈ ಶ್ಯಾಮ. ಇವರನ್ನು ಒಂದೇ ಒಂದು ಕ್ಷಣ ಬಿಟ್ಟಿರುತ್ತಿರಲಿಲ್ಲ ಸಿರಿ. ಅಪ್ಪನ ಅಬ್ಸೆನ್ಸನ್ನು ಶ್ಯಾಮನಲ್ಲಿ ತುಂಬಿ ಕೊಂಡಳು. ಇವರೂ ಅಷ್ಟೇ, ಸ್ವಂತ ಮಗಳಂತೆ ನೋಡಿಕೊಂಡರು. ತಾಯಿಯ ತಮ್ಮನ ಮಗನಾದುದರಿಂದ ನನಗೆ ಸಣ್ಣ ಸಲುಗೆಯೂ ಇತ್ತು. ಬರಬರುತ್ತಾ ಸಿರಿ ಇವರನ್ನು ‘ಅಪ್ಪಾ’ ಎಂದೇ ಕರೆಯಲು ಶುರು ಮಾಡಿದಳು! ಕೊನೆಗೆ ಈ ಮಗುವಿನ ಆಸೆಯಂತೆ ನಾವು ಮದುವೆಯಾದೆವು. ಮದುವೆಯ ನಂತರ ಅಪ್ಪ ಸಿಕ್ಕಿದ ಖುಷಿಯಲ್ಲಿ ಸಿರಿಯ ಬದುಕೇ ಬದಲಾಯಿತು. ಓದಿನಲ್ಲಿ ಜಾಣೆ ಈ ಸಿರಿ. ನಿನ್ನ ಹೆಸರೇನು ಅಂತ ಕೇಳಿದ್ರೆ S.I.R.I. ಅಂತ ಸ್ಪೆಲ್ಲಿಂಗ್ ಹೇಳಿದ ಮೇಲೆಯೇ ಸಿರಿ ಎಂದು ಹೆಸರು ಹೇಳುತ್ತಿದ್ದಳು! ಆದರೆ ಕ್ರಮೇಣ ಪದೇ ಪದೇ ತನ್ನ ನೋಟ್ ಬುಕ್ಕಿನಲ್ಲಿ 27 ನಂಬರ್ ಬರೆಯುತ್ತಿದ್ದಳು! ಯಾಕೆಂದು ನಮಗೆ ಅರ್ಥವಾಗಿರಲಿಲ್ಲ. ಕೊನೆಗೂ ಹೃದಯದ ಕಾಯಿಲೆ ಅವಳನ್ನು ಬಲಿ ತೆಗೆದುಕೊಂಡು ಬಿಟ್ಟಿತು. ಸಿರಿ ಕೊನೆಯುಸಿರೆಳೆದ ದಿನಾಂಕ ಏಪ್ರಿಲ್ 27…’ – ಎಂದು ಹೇಳುತ್ತಾ ಯೋಗಿತಾ ಕಣ್ಣೀರಾದಳು…
ಸ್ವಲ್ಪ ಹೊತ್ತಿನ ನಂತರ ಸುಧಾರಿಸಿಕೊಂಡು ಯೋಗಿತಾ ಮಾತು ಮುಂದುವರಿಸಿದಳು : ‘ಸರ್, ಅವಳು ಹೃದಯ ಕಾಯಿಲೆಯಿಂದ ಬಳಲುತ್ತಿದ್ದಾಗ ನನಗಿರುವ ಆಯ್ಕೆ ಅಳು ಮಾತ್ರವಾಗಿತ್ತು. ಆಗ ಆಕೆ ಹೇಳುತ್ತಿದ್ದಳು : ‘ಅಮ್ಮಾ, ಅಳಬೇಡಮ್ಮ. ಒಂದು ವೇಳೆ ನಾನು ಇಲ್ಲವಾದರೂ ಮತ್ತೆ ನಿನ್ನದೇ ಹೊಟ್ಟೆಯಲ್ಲಿ ಹುಟ್ಟಿ ಬರುತ್ತೇನೆ…’ – ಎಂದು ಹೇಳುತ್ತಾ ಯೋಗಿತಾ ತನ್ನ ಉಬ್ಬಿದ ಹೊಟ್ಟೆಯನ್ನು ಸವರಿಕೊಂಡಳು! ನಂತರ ಮಾತು ಮುಂದುವರಿಸಿದಳು : ‘ಈಗ ನಾನು ಸೀತಾರಾಮ ಧಾರಾವಾಹಿಗೆ ಅಡಿಕ್ಟ್ ಆಗಿ ಬಿಟ್ಟಿದ್ದೇನೆ. ಪ್ರತಿ ನಿತ್ಯ ನೋಡುವಾಗಲೂ ನನ್ನ ಸಿರಿ ನೆನಪಾಗುತ್ತಾಳೆ. ಒಂದೇ ಒಂದು ವ್ಯತ್ಯಾಸವೆಂದರೆ ಅಲ್ಲಿ ಸಿಹಿ ಶುಗರ್ ಪೇಷಂಟ್, ಇಲ್ಲಿ ಸಿರಿ ಹಾರ್ಟ್ ಪೇಷಂಟ್. ಸಿರಿ ಮೃತಳಾಗಿದ್ದಾಳೆ. ಸಿಹಿ ಇನ್ನೂ ಗುಟುಕು ಜೀವ ಹಿಡಿದುಕೊಂಡಿದ್ದಾಳೆ.
ವಿಶೇಷವೆಂದರೆ ನನ್ನ ಹೆಸರು ಯೋಗಿತಾ ಅಂತ ಇದ್ರೂ ಗೀತಾ ಅಂತಾನೇ ಎಲ್ರೂ ಕರೀತಾರೆ. ಇದು ಸೀತಾ ಹೆಸರಿಗೆ ಪರ್ಯಾಯವೋ ಗೊತ್ತಿಲ್ಲ. ನನ್ನವರ ಹೆಸರು ಶ್ಯಾಮ. ಇದು ಕೂಡಾ ರಾಮ ಹೆಸರಿನ ಪರ್ಯಾಯವೋ ಗೊತ್ತಿಲ್ಲ. ಧಾರಾವಾಹಿಯಲ್ಲಿ ಸಿಹಿ ಇದ್ದಾಳೆ. ಇದು ಸಿರಿ ಹೆಸರಿನ ಪರ್ಯಾಯವೋ ಗೊತ್ತಿಲ್ಲ! ಒಟ್ಟಿನಲ್ಲಿ ಸೀತಾರಾಮ ಧಾರಾವಾಹಿಯ ಪರ್ಯಾಯ ಕಥೆಯಂತಿದೆ ನಮ್ಮ ಬದುಕು… ಹಾಂ…ಅಂದ ಹಾಗೆ, ಡಾಕ್ಟ್ರು ನನ್ನ ಡೆಲಿವರಿ ಡೇಟ್ ಕೊಟ್ಟಿದ್ದಾರೆ : ಏಪ್ರಿಲ್ 27!’ – ಎಂದು ಹೇಳಿ ಮಾತು ಮುಗಿಸಿದಾಗ ನಾನು ಮೂಕನಾಗಿದ್ದೆ!
ಈಗ ಹೇಳಿ : ಇದು ಜನ್ಮ ಜನ್ಮಾಂತರದ ಕಥೆಯಾ? ಅಥವಾ ಭಾವ-ಬಂಧದ ವಾಸ್ತವದ ವಿಸ್ಮಯವಾ? ನೀವೇ ಹೇಳಬೇಕು...